ಚಿತ್ರದುರ್ಗ. ಫೆ.11: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸುವ ಎಲ್‍ಇಡಿ ವಾಹನಕ್ಕೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು, ಕಾರ್ಯಕ್ರಮಗಳನ್ನು ಎಲ್‍ಇಡಿ ಪರದೆ ಮೂಲಕ ಸಂಚಾರಿ ವಾಹನದಲ್ಲಿ ಪ್ರದರ್ಶನ ನೀಡುವ ವಾಹನವು ಜಿಲ್ಲೆಯಾದ್ಯಂತ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಲಿದೆ.
![](https://suddione.com/content/uploads/2024/10/gifmaker_me-5-1.gif)
ಪ್ರದರ್ಶನ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಅವರು, ಜನರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರನ್ನು ತಲುಪುತ್ತಿವೆ. ಯೋಜನೆಗಳ ಸದುಪಯೋಗವನ್ನು ಪಡೆಯುತ್ತಿರುವ ಸಾರ್ವಜನಿಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ವಾರ್ತಾ ಇಲಾಖೆಯು ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಪ್ರಚಾರದ ಎಲ್‍ಇಡಿ ವಾಹನವು ಜಿಲ್ಲೆಯಲ್ಲಿ 5 ದಿನಗಳ ಕಾಲ ಆಯ್ದ ಸುಮಾರು 20 ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಳ್ಳಲಿದೆ. ವಾಹನದೊಂದಿಗೆ ಜಾನಪದ ಸಂಗೀತ ಕಲಾವಿದರೂ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಶಾಲಾ ಶಿಕ್ಷಣ ಇಲಾಖೆ ಡಿವೈಪಿಸಿ ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸೇರಿದಂತೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲ್ಲೂಕು ಸಮಿತಿ ಸದಸ್ಯರುಗಳಾದ ಅಬ್ದುಲ್ಲ, ಮುದಸಿರ್, ತಿಪ್ಪೇಸ್ವಾಮಿ ಜೆ.ಎಂ., ಮುಖಂಡರಾದ ಮಂಜುನಾಥ್ ಸೇರಿದಂತೆ ಇತರರು ಇದ್ದರು.
![](https://suddione.com/content/uploads/2025/01/studio-11.webp)
![](https://suddione.com/content/uploads/2025/02/site.webp)