ಚಿಕ್ಕಬಳ್ಳಾಪುರ: ಭಾಷಣದ ಬರದಲ್ಲೋ, ಮಾತನಾಡುವ ಬರದಲ್ಲೋ ನೀಡುವ ಹೇಳಿಕೆ ಕೆಲವೊಮ್ಮೆ ದೊಡ್ಡ ಮಟ್ಟಕ್ಕೆ ತಲುಪಿ ಬಿಡುತ್ತವೆ, ಕೋರ್ಟ್ ವರೆಗೂ ಕರೆದುಕೊಂಡು ಹೋಗುತ್ತೆ. ಈಗ ಸಚಿವ ಸುಧಾಕರ್ ಅವರ ಪರಿಸ್ಥಿತಿ ಕೂಡ ಅದೇ ಆಗಿದೆ. ನೀಡಿದ ಒಂದು ಹೇಳಿಕೆಯಿಂದಾಗಿ ಇಂದು ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಶಾಶ್ವತ ನೀರಾವರಿ ಯೋಜನೆಯ ಅಧ್ಯಕ್ಷ ಆಂಜನೇಯ ರೆಡ್ಡಿ ವಿರುದ್ಧ ನೀಡಿದ್ದ ಹೇಳಿಕೆಯಿಂದಾಗಿ ಇಂದು ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರಾಗಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿ, ಆಂಜನೇಯ ರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋಪಗೊಂಡ ಸಚಿವ ಸುಧಾಕರ್ ಮಾತಿನ ವಾಗ್ದಾಳಿ ನಡೆಸಿದ್ದರು. ಕಳ್ಳಬಟ್ಟಿ ಕುಡಿಸಿ, ರೈತರನ್ನು ಸಾಯಿಸಿ, ಜೈಲಿಗೆ ಹೋಗಿ ಬಂದ ನಕಲಿ ನೀರಾವರಿ ಹೋರಾಟಗಾರ ನನ್ನ ವಿರುದ್ಧ ಕಾನೂನು ಹೋರಾಟ ಮಾಡುತ್ತಾನೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದನ್ನು ಪ್ರಶ್ನಿಸಿ ಆಂಜನೇಯ ರೆಡ್ಡಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ದೂರಿನ ಅನ್ವಯ ವಿಶೇಷ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸಿ, ಸಮನ್ಸ್ ನೀಡಿದೆ. ಬಳಿಕ ಸುಧಾಕರ್ ಅವರು ಜಾಮೀನಿಗೆ ಅರ್ಜಿ ಹಾಕಿದ್ದರು. ಷರತ್ತು ಬದ್ಧ ಜಾಮೀನು ನೀಡಿ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇಂದು ಸಚಿವ ಸುಧಾಕರ್ ಕೋರ್ಟ್ ಗೆ ಹಾಜರಾಗಲಿದ್ದಾರೆ.