ಚಿತ್ರದುರ್ಗ : ನಾಟಕವು ವ್ಯಕ್ತಿತ್ವ ವಿಕಸನ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಸಂವಹನ ಕ್ರಿಯೆಯಲ್ಲಿ ಭಾವನಾತ್ಮಕ ಮೌಲ್ಯಯುತ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಇದಕ್ಕೆ ಸ್ಪೂರ್ತಿಯಾಗಿ ರಂಗದ ಮೇಲೆ ಬರುವ ಪ್ರತಿಯೊಂದೂ ಪಾತ್ರಗಳು ನಿಜ ಜೀವನಕ್ಕಿಂತಲೂ ಹೆಚ್ಚಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಆರ್ಥಿಕ ತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.
ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಗರದ ಡಿಸಿ ಸರ್ಕಲ್‍ನಲ್ಲಿರುವ ಶರಣೆ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಚಿತ್ರದುರ್ಗ ಜಿಲ್ಲಾ ರಂಗ ಪುನಃಶ್ಚೇತನ ಕಾರ್ಯಕ್ರಮದ ಅಂಗವಾಗಿ ರಂಗ ಉಪನ್ಯಾಸ, ರಂಗ ಸನ್ಮಾನ, ರಂಗ ಸಂವಾದ ಹಾಗೂ ರಂಗಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಕ ಉತ್ತಮ ಸಂವಹನ ಕಲೆಯಾಗಿದೆ. ರಂಗಕಲೆಯನ್ನು ಶಾಲೆಯ ತರಗತಿಗಳಿಗೆ ತರುವಂಥಹ ಕೆಲಸವಾಗಬೇಕು. ಶಿಕ್ಷಕರಿಗೆ ರಂಗ ತರಬೇತಿ ನೀಡಿದರೆ ಪರಿಣಾಮಕಾರಿಯಾಗಿ ಪಾಠಬೋಧನೆ ಮಾಡಬಹುದು. ಇದರಿಂದ ಮಕ್ಕಳಿಗೆ ರಂಗಭೂಮಿಯ ಆಯಾಮಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸಿದರೆ ಚೈತನ್ಯದಾಯಕವಾಗಿರುತ್ತದೆ. ಸರ್ಕಾರ ಪ್ರತಿಯೊಂದು ಶಾಲೆಗಳಲ್ಲೂ ರಂಗಶಿಕ್ಷಕರನ್ನು ನೇಮಕ ಮಾಡಬೇಕು. ರಂಗಭೂಮಿಯ ಮೂಲಕ ಯುವಪೀಳಿಗೆಗೆ ಉತ್ತಮ ಸಂಸ್ಕøತಿಯ ವಸ್ತು ವಿಷಯಗಳನ್ನು ಹೇಳಿಕೊಡುವ ಕಾರ್ಯ ನಡೆಸಬೇಕಿದೆ.
ಸರ್ಕಾರಿ ಉದ್ಯೋಗಗಳು ಕಡಿಮೆಯಾಗುತ್ತಿರುವುದರಿಂದ ರಂಗಭೂಮಿಯ ಚಟುವಟಿಕೆಗಳನ್ನೂ ಕೂಡ ಸ್ವಯಂ ಉದ್ಯೋಗದ ಮಾದರಿಯಲ್ಲಿ ಬೆಳೆಸುವಂಥಹ ಅನ್ವೇಷಣೆಯನ್ನು ಸಂಶೋಧನೆ ಮಾಡುವ ಅಗತ್ಯವಿದೆ ಎಂದರು.
ಶಿಕ್ಷಣಶಾಸ್ತ್ರ ಪ್ರಾಧ್ಯಾಪಕ ಹಾಗೂ ರಂಗವಿಮರ್ಶಕ ಡಾ.ವಿ.ಬಸವರಾಜು ಚಿತ್ರದುರ್ಗ ಜಿಲ್ಲಾ ರಂಗಭೂಮಿಯ ಪ್ರಸ್ತುತತೆ ಬಗ್ಗೆ ಮಾತನಾಡಿ ಕಳೆದ ದಿನಗಳಲ್ಲಿ ರಂಗಭೂಮಿ ಬೆಳೆದು ಬಂದ ರೀತಿಯಂತೆ, ಪ್ರಸ್ತುತ ಕಾಲಮಾನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಮತ್ತೆ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚಿಸಬೇಕು.
ಒಗ್ಗೂಡುವ ಕಾರ್ಯದಿಂದಾಗಿ ರಂಗಭೂಮಿಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ರಂಗ ಚಟುವಟಿಕೆಗಳಿಗೆ ಪರಿಷತ್ತಿನಿಂದ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ.
ಶಿಕ್ಷಕರಿಗೆ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುವ ಶಿಬಿರಗಳನ್ನು ನಡೆಸಲಾಗುತ್ತದೆ ಎಂದರು. ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ನಿವೃತ್ತ ಡಿವೈಎಸ್‍ಪಿ ಅಬ್ದುಲ್‍ರೆಹಮಾನ್, ಸಮಾಜಸೇವಕ ಆರ್. ಶೇಷಣ್ಣಕುಮಾರ್, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ರಂಗಪತ್ರಿಕೆಗಳ ಸಾಂಸ್ಕøತಿಕ ಅಧ್ಯಯನ ವಿಷಯವಾಗಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದ ಕೆ.ಮೋಹನ್‍ಕುಮಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಂಗಭೂಮಿ ಕಲಾವಿದರಾದ ಎಂ.ಕೆ.ಹರೀಶ್, ಪ್ರಕಾಶ್ ಬಾದರದಿನ್ನಿ, ಕಾಲ್ಕೆರೆ ಚಂದ್ರಪ್ಪ, ಕರಿಯಣ್ಣ ಕಾನಾಮಡುಗು, ಶ್ರೀನಿವಾಸ ಮಳಲಿ, ಸಾಹಿತಿ ಹುರುಳಿ ಬಸವರಾಜ್, ನಾಟಕಕಾರ ಹಾಗೂ ನಿವೃತ್ತ ವಿಜ್ಞಾನ ಶಿಕ್ಷಕ ಎಂ.ಆರ್.ದಾಸೇಗೌಡ, ಜಾನಪದ ಕಲಾ ಮಂಡಲದ ಸಿ.ರಾಜಣ್ಣ, ಕಲಾವಿದ ಚನ್ನಬಸಪ್ಪ, ಕವಿ ಹಾಗೂ ಸಾಹಿತಿ ಉಮೇಶ್‍ಬಾಬು ಮಠದ್, ಸದ್ಗುರು, ಅಂಜಿನಪ್ಪ ಮೆದೇಹಳ್ಳಿ ಮತ್ತಿತರರು ಉಪಸ್ಥಿತರಿದ್ದು ರಂಗ ಸಂವಾದದಲ್ಲಿ ಭಾಗವಹಿಸಿದ್ದರು. ಗಾಯಕರಾದ ಕೆ.ಗಂಗಾಧರ, ಹಿಮಂತ್‍ರಾಜ್, ಮೈಲಾರಿ ಹಾಗೂ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮುಂತಾದ ಕಲಾವಿದರು ರಂಗಸಂಗೀತ ಗಾಯನ ನಡೆಸಿಕೊಟ್ಟರು.