ಚಿತ್ರದುರ್ಗ : ಮಾನವೀಯತೆಯನ್ನು ಯಾರು ಪ್ರೀತಿಸುತ್ತಾರೋ ಅವರು ಎಲ್ಲರನ್ನು ಪ್ರೀತಿಸುತ್ತಾರೆ. ಪ್ರೀತಿಯ ಜಾಗದಲ್ಲಿ ಭೀತಿ ಬರುತ್ತಿದೆ. ಮಾನವ ಪರಸ್ಪರರನ್ನು ಪ್ರೀತಿಸಿ ಗೌರವಿಸುವ ಕೆಲಸ ಆಗುತ್ತಿಲ್ಲ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ವಿಷಾಧಿಸಿದರು.
ಮಾದಾರ ಚನ್ನಯ್ಯ ಸ್ವಾಮೀಜಿ ಸಮಾಜ ಸೇವಾ ದೀಕ್ಷೆ ಸ್ವೀಕರಿಸಿ 20 ವರ್ಷವಾಗಿರುವುದರಿಂದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಭಕ್ತಿ ಸಮರ್ಪಣೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಡಾ.ಶಿವಮೂರ್ತಿ ಶರಣರು ಪರಿಶ್ರಮ, ಪ್ರಯತ್ನ, ಬುದ್ದಿಮತ್ತೆ, ಮುಖಂಡತ್ವ, ಸಂಘಟನೆ ಶಕ್ತಿ ಮುಖಾಂತರ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಪೀಠ ಕಟ್ಟಿರುವುದನ್ನು ನೋಡಿದರೆ ಭರವಸೆಯ ವ್ಯಕ್ತಿ ಎನ್ನುವುದು ಗೊತ್ತಾಗುತ್ತದೆ.
ಸಂಪ್ರದಾಯವಾದಿಗಳೆ ಬೇರೆ, ಪ್ರಗತಿಪರವಾದಿಗಳೇ ಬೇರೆ. ಸಂಘರ್ಷದ ಹಾದಿ ಬೇಡ. ಸಮನ್ವಯದ ಹಾದಿ ಬೇಕೆಂದು ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಪ್ರಗತಿಪರವಾದಿಗಳನ್ನು ಭಕ್ತಿ ಸಮರ್ಪಣೆ ಕಾರ್ಯಕ್ರಮಕ್ಕೆ ಬರಮಾಡಿಕೊಂಡಿರುವುದು ಸುಲಭದ ಕೆಲಸವಲ್ಲ ಎಂದು ಗುಣಗಾನ ಮಾಡಿದರು.
ಹನ್ನೆರಡನೆ ಶತಮಾನ ಆದರ್ಶದ ಶತಮಾನವಾಗಿತ್ತು. ದಾರ್ಶನಿಕರು, ಸಾತ್ವಿಕರು, ಸತ್ಪುರುಷರು, ಸಮಾಜ ಸುಧಾರಕರು, ಕ್ರಾಂತಿಕಾರರು ಸಿಗುತ್ತಿದ್ದರು. ಭೌತಿಕ, ಲೌಕಿಕ, ದುರಾಸೆ, ದುಡ್ಡಿನ ಹಿಂದೆ ಓಡುವ ಹಪಹಪಿಯ ಮಾನವ ಸಿಗುತ್ತಿದ್ದಾನೆ. ಮಾನವರಾಗಿ ಮಾನವರನ್ನು ಪ್ರೀತಿಸುವವರು ಸಿಗುತ್ತಿಲ್ಲ. ಭಕ್ತಿಭಂಡಾರಿ ಬಸವಣ್ಣ ಎಲ್ಲಾ ಜಾತಿಯವರನ್ನು ಪ್ರೀತಿಸುವ ಮೂಲಕ ಸಮಾನತೆ ಸಂದೇಶವನ್ನು ಸಾರಿದರು. ಅದಕ್ಕಾಗಿ ಮಾನವ ಪ್ರೀತಿಯನ್ನು ಬೆಳೆಸಿ ಉಳಿಸಿಕೊಂಡು ಹೋಗಬೇಕಿದೆ.
ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಸಮಾಜ ಸೇವಾ ದೀಕ್ಷೆ ಸ್ವೀಕರಿಸಿ ಇಪ್ಪತ್ತು ವರ್ಷಗಳಾಗಿರುವುದರಿಂದ ನನಗೆ ಭಕ್ತಿ ಸಮರ್ಪಣೆ ಮಾಡುತ್ತಿರುವುದು ಅವರಲ್ಲಿನ ನೈಪುಣ್ಯತೆ, ವೈಶಿಷ್ಟತೆಯನ್ನು ತೋರುತ್ತದೆ. ಮುರುಘಾಮಠಕ್ಕೆ ಸಲಹಾ ಸಮಿತಿ ರಚಿಸಿ ಹನ್ನೆರಡನೆ ಶತಮಾನದ ಬಸವಣ್ಣನವರು ಕಂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಪರಂಪರೆಯನ್ನು ಆಂತರ್ಯದಲ್ಲಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.
ಮಾಜಿ ಸಂಸದರುಗಳಾದ ಕೆ.ಹೆಚ್.ಮುನಿಯಪ್ಪ, ಬಿ.ಎನ್.ಚಂದ್ರಪ್ಪ, ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಮಾರಸಂದ್ರಮುನಿಯಪ್ಪ, ದಲಿತ ಮುಖಂಡ ಎನ್.ಮೂರ್ತಿ ಇವರುಗಳು ಮಾತನಾಡಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಮಹಾಸ್ವಾಮಿಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ, ಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು.