ಸುದ್ದಿಒನ್, ಚಿತ್ರದುರ್ಗ, ನವಂಬರ್.10 : ಕಳೆದ ವರ್ಷದಿಂದ ಜೈಲಿನಲ್ಲಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಇಂದು ಬಿಡುಗಡೆ ಭಾಗ್ಯ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿಕೆ ಮಾಡಿದೆ. ನವೆಂಬರ್ 15 ಕ್ಕೆ ಮುಂದೂಡಿಕೆ ಮಾಡಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲ ಹೆಚ್.ಆರ್. ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸಿದ್ದು, ಈಗಾಗಲೇ 2ನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಇರುವುದರಿಂದ ಮತ್ತು ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಬೇಕೆಂದು ಮನವಿ ಸಲ್ಲಿಸಿದರು.
ಮುರುಘಾ ಶ್ರೀಗಳ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ. ಅದರಲ್ಲಿ ಒಂದು ಪ್ರಕರಣಕ್ಕೆ ಈಗಾಗಲೇ ಜಾಮೀನು ಸಿಕ್ಕಿದೆ. ಈ ಜಾಮೀನು ಪ್ರತಿಯನ್ನು ಇಂದು ಮುರುಘಾ ಶರಣರ ಪರ ವಕೀಲರಾದ ಸಂದೀಪ್ ಪಾಟೀಲ್, ಇಂದು ಕೋರ್ಟ್ ಗೆ ಸಲ್ಲಿಸಿದ್ದಾರೆ. ಈ ಮೂಲಕ ಇಂದು ಬಿಡುಗಡೆಯಾಗುವ ಸಾಧ್ಯತೆ ಇತ್ತು ಎಂದೇ ಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
ಶ್ರೀಗಳ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಶ್ಯೂರಿಟಿ ಹಾಕಿರುವ ಪ್ರತಿಗಳನ್ನು ಪರಿಶೀಲನೆ ಮಾಡುವ ಉದ್ದೇಶದಿಂದ ಮತ್ತು ಮೂರು ದಿನಗಳ ದೀಪಾವಳಿ ಹಬ್ಬದ ರಜೆಯ ಪ್ರಯುಕ್ತ ವಿಚಾರಣೆಯನ್ನು, ಕೋರ್ಟ್ ಮುಂದೂಡಲಾಗಿದೆ. ಇನ್ನು ಶ್ರೀಗಳ ಜಾಮೀನಿಗೆ, ಶಾಸಕ ವೀರೇಂದ್ರ ಅವರ ಸಹೋದರ ಕೆಸಿ ನಾಗಾರಾಜ್ ಹಾಗೂ ಮಧುಸೂದನ್ ಎಂಬುವವರು ಶ್ಯೂರಿಟಿ ನೀಡಿದ್ದಾರೆ. ಇದರ ಜೊತೆಗೆ ಎರಡು ಲಕ್ಷ ಬಾಂಡ್ ಹಾಗೂ ಜಮೀನಿನ ಸಲ್ಲಿಕೆ
ಮಾಡಿದ್ದಾರೆ. ನವೆಂಬರ್ 15ಕ್ಕೆ ಅರ್ಜಿ ವಿಚಾರಣೆಯಾದ ಬಳಿಕ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ.