ಬೆಂಗಳೂರು : ವೈದ್ಯಕೀಯ ಚಿಕಿತ್ಸೆಯಲ್ಲಿ ತಂತ್ರಜ್ಞಾನದ ಬಳಕೆ, ಚಿಕಿತ್ಸಾ ವಿಧಾನ ಮತ್ತು ರೋಗಿಗಳಿಗೆ ಸಹಾಯ ನೀಡಿದೆ. ಆದರೆ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿಗೆ ಡಾ. ಎಸ್. ರಾಮಚಂದ್ರ ಅವರ ಕೊಡುಗೆ ಅಮೂಲ್ಯವಾಗಿದ್ದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಆವರಣದಲ್ಲಿ ಡಾ. ಎಸ್. ರಾಮಚಂದ್ರ ಅವರ ಪುತ್ಥಳಿ ಅನಾವವರಣಗೊಳಿಸಿ ಮಾತನಾಡಿದ ಸಚಿವರು, 1958ರಲ್ಲಿ ಅರಂಭವಾದ ಈ ಸಂಸ್ಥೆ 6 ದಶಕಗಳಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಡಾ. ಎಸ್. ರಾಮಚಂದ್ರಪ್ಪನವರ ಕೊಡಗೆ ಅತ್ಯಮೂಲ್ಯ. ಅವರ ಬದ್ಧತೆ ದಂತ ವೈದ್ಯಕೀಯ ಚಿಕಿತ್ಸೆಯ ಅಭಿವೃದ್ಧಿಗೆ ಕಾಣಿಕೆ ನೀಡಿದೆ ಎಂದು ಹೇಳಿದರು.
ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಆರಂಭಕ್ಕೆ ರಾಮಚಂದ್ರಪ್ಪನವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿ, ನಿಸ್ವಾರ್ಥ ಸೇವೆ ಈ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ. ಇಂದು ಸಾವಿರಾರು ವಿದ್ಯಾರ್ಥಿಗಳು ದಂತ ವೈದ್ಯರಾಗಿ ಇಲ್ಲಿಂದ ಹೊರ ಹೋಗುತ್ತಿದ್ದಾರೆ. ಇದು 6 ದಶಕಗಳ ಹಿಂದೆ ರಾಮಚಂದ್ರಪ್ಪನವರು ಹರಿಸಿದ ಬೆವರಿನ ಪ್ರತಿಫಲವಾಗಿದೆ. ಕರ್ನಾಟಕದ ದಂತ ವೈದ್ಯಕೀಯ ಶಿಕ್ಷಣಕ್ಕೆ ಡಾ. ರಾಮಚಂದ್ರಪ್ಪನವರು ಪಿತಾಮಹ ಎಂದು ಹೇಳಿದರು.
ಚಿಕಿತ್ಸಾಪದ್ಧತಿಯಲ್ಲಿ ಆಧುನಿಕತೆ ಬಂದಿದೆ. ಸರ್ಕಾರಿ ದಂತ ವೈದ್ಯಕೀಯ ಚಿಕಿತ್ಸೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಲೇಸರ್ ರಿಸರ್ಚ್ ಸೆಂಟರ್ ಆರಂಭಿಸಲಾಗಿದೆ. ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಮೂಲಕ ಆರಂಭವಾಗಿರುವ ಈ ಚಿಕಿತ್ಸೆಯನ್ನು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ನೀಡಲಾಗುತ್ತಿದೆ. ಇದರ ಜೊತೆಗೆ Real time Polymerase Chain Reaction, ಮಲ್ಟಿಪ್ಲೆಕ್ಸ್ ಪಿಸಿಆರ್, ಡಿಎನ್ಎ microassa ಸೇರಿದಂತೆ ಹಲವು ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆಗಳು ಓರಲ್ ಪ್ಯಾಥೋಲಜಿ ವಿಭಾಗದಲ್ಲಿ ಲಭ್ಯವಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ, ನ್ಯಾಷಲ್ ಓರಲ್ ಹೆಲ್ತ್ ಕಾರ್ಯಕ್ರಮದಡಿ ಹಲವು ಚಿಕಿತ್ಸೆಗಳನ್ನು ನೀಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಬಾಯಿ ಹಾಗೂ ಹಲ್ಲುಗಳಿಗೆ ಸಂಬಂಧ ಪಟ್ಟ ಚಿಕಿತ್ಸೆ ಸಿಗಬೇಕು. ಇದಕ್ಕಾಗಿ ಮೊಬೈಲ್ ಡೆಂಟಲ್ ಕೇರ್ ಯೂನಿಟ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಹಲವು ಕಡೆಗಳಲ್ಲಿ ಕ್ಯಾಂಪ್ ಮೂಲಕ ಚಿಕಿತ್ಸೆ ನೀಡುತ್ತದ್ದಾರೆ. ಬಡ ವ್ಯಕ್ತಿಗೂ ದುಬಾರಿ ಆಗಿರುವ ಚಿಕಿತ್ಸೆ ಸಿಗಬೇಕು ಅನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.