ಡಾ.ಮನಮೋಹನಸಿಂಗ್‍ರವರು ಭಾರತದ ಆರ್ಥಿಕ ಸುಧಾರಕ : ಪ್ರೊ.ಹೆಚ್.ಜಿ. ದೇವರಾಜ್

suddionenews
3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 06 : ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್‍ಸಿಂಗ್ ಶ್ರೇಷ್ಟ ಆರ್ಥಿಕ ತಜ್ಞ, ಚಿಂತಕರಾಗಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಹೆಚ್.ಜಿ. ದೇವರಾಜ್ ಬಣ್ಣಿಸಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕ ಮತ್ತು ಮುಕ್ತ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ದಿ. ಡಾ.ಮನಮೋಹನಸಿಂಗ್‍ರವರ ನುಡಿನ ನಮನದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಡಾ.ಮನಮೋಹನಸಿಂಗ್‍ರವರು ಭಾರತದ ಪ್ರಧಾನಿ ಎನ್ನುವುದಕ್ಕಿಂತ ಮಿಗಿಲಾಗಿ ಅವರೊಬ್ಬ ಆರ್ಥಿಕ ಸುಧಾರಕ. ಸರಳ ವ್ಯಕ್ತಿತ್ವದ ಜ್ಞಾನ ಭಂಡಾರವಾಗಿದ್ದರು. ಎಂಟು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು ಕೇಂದ್ರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಯು.ಜಿ.ಸಿ.ಚೇರ್ಮನ್ ಕೂಡ ಆಗಿದ್ದರು ಎಂದು ಸ್ಮರಿಸಿದರು.

ಉದ್ಯೋಗ ಖಾತ್ರಿ ಯೋಜನೆ, ಆಧಾರ್ ಕಾರ್ಡ್, ಮಾಹಿತಿ ಹಕ್ಕು ಕಾಯಿದೆ ಇವುಗಳನ್ನೆಲ್ಲಾ ಜಾರಿ ತಂದ ಸಿಂಗ್‍ರವರು ಆಹಾರ ಭದ್ರತೆಗೆ ಒತ್ತು ಕೊಟ್ಟಿದ್ದರಿಂದ ಭಾರತ ಈಗ ಬೇರೆ ದೇಶಗಳಿಗೆ ಆಹಾರ ಕಳಿಸುವಷ್ಟು ಶ್ರೀಮಂತವಾಗಿದೆ ಎಂದರು.

ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ ಮಾತನಾಡಿ ಎರಡು ಬಾರಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದು ಆರ್ಥಿಕ ಪ್ರಗತಿಗೆ ಶ್ರಮಿಸಿದ ಡಾ.ಮನಮೋಹನ್‍ಸಿಂಗ್ ವಿವಿಧ ಹುದ್ದೆಗಳನ್ನು ಅಲಂಕರಿಸಿದರೂ ಎಂದಿಗೂ ಅಧಿಕಾರದ ದರ್ಪ ತೋರಲಿಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದು. ಸಾಕಷ್ಟು ಟೀಕೆ, ಟಿಪ್ಪಣಿ, ಸವಾಲುಗಳನ್ನು ಎದುರಿಸಿದರು.

ಕಮ್ಯುನಿಸ್ಟ್‍ನವರು ಕಟುವಾಗಿ ಟೀಕಿಸುತ್ತಿದ್ದರು. ಶುದ್ದ ಹಸ್ತ ರಾಜಕಾರಣಿಯಾಗಿದ್ದ ಸಿಂಗ್‍ರವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡುತ್ತ ನಿವೃತ್ತ ಪ್ರಾಧ್ಯಾಪಕರುಗಳು ಮಾನಸಿಕವಾಗಿ ಸುಸ್ಥಿರವಾಗಿದ್ದಾರೆಂದರೆ ಅದಕ್ಕೆ ಬಹುಮುಖ್ಯ ಕಾರಣಕರ್ತರು ನಮ್ಮ ದೇಶದ ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್‍ರವರು. ಆರ್ಥಿಕ ಆಯಾಮಗಳಲ್ಲಿ ಸಿಂಗ್‍ರವರಲ್ಲಿದ್ದ ಚಿಂತನೆ ಪ್ರಧಾನವಾಗಿತ್ತು. ಶ್ರೇಷ್ಟ ಆರ್ಥಿಕ ಚಿಂತಕ. ಸಮಾಜವಾದದ ಆರ್ಥಿಕ ಚಿಂತನೆಯನ್ನು ಮೂಲ ದ್ರವ್ಯವಾಗಿಟ್ಟುಕೊಂಡಿದ್ದರು. ಪರಿಶುದ್ದ ರಾಜಕಾರಣಿ. ಹಾಗಾಗಿ ಅವರೊಬ್ಬ ಪ್ರಧಾನಿ ಎನ್ನುವುದಕ್ಕಿಂತ ಆರ್ಥಿಕ ಜ್ಞಾನಿಯಾಗಿದ್ದರು. ಭ್ರಷ್ಟಾಚಾರದ ಸೋಂಕು ಹತ್ತಿರಕ್ಕೆ ಸುಳಿಯಲು ಬಿಡಲಿಲ್ಲ ಎಂದು ಹೇಳಿದರು.

ಪ್ರೊ.ಹೆಚ್.ಲಿಂಗಪ್ಪ ಮಾತನಾಡುತ್ತ ಬುದ್ದ, ಬಸವ, ಭೀಮ ಪ್ರಜ್ಞೆಯನ್ನು ಹೊಂದಿದ್ದ ಡಾ.ಮನಮೋಹನ್‍ಸಿಂಗ್ ಪ್ರಧಾನಿಯಾಗಿ ಕೇವಲ ಒಂದು ರೂ.ವೇತನ ಪಡೆದುಕೊಳ್ಳುತ್ತಿದ್ದರು. ಆಡಂಭರದ ಜೀವನವಿಲ್ಲದೆ ಸರಳವಾಗಿ ಬದುಕಿದವರು. ಒಳ್ಳೊಳ್ಳೆ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಬಡವರು ನೆಮ್ಮದಿಯಿಂದ ಬದುಕುವಂತಾಯಿತು. ದೇಶಕ್ಕೆ ಆರ್ಥಿಕ ಭದ್ರತೆಯನ್ನು ಕೊಟ್ಟಂತ ಮೇರು ವ್ಯಕ್ತಿತ್ವ ಅವರದು. ಕೆಲವರು ಮಹಾ ಮೌನಿ ಎಂದು ಟೀಕಿಸುತ್ತಿದ್ದರು. ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ ಎಂದು ಸ್ಮರಿಸಿದರು.

ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಯು.ಜಿ.ಸಿ.ವೇತನಕ್ಕೆ ಚಾಲನೆ ಕೊಟ್ಟಿದ್ದು, ಡಾ.ಮನಮೋಹನ್‍ಸಿಂಗ್. ಉನ್ನತ ಶಿಕ್ಷಣದಲ್ಲಿ ಅಧ್ಯಾಪಕರುಗಳಿಗೆ ಶೈಕ್ಷಣಿಕೆ ಕೆನೆ ಪದರ ತರುವ ಆಶಯ ಅವರದಾಗಿತ್ತು. ಆರ್ಥಿಕ ಸಮತೋಲನ, ಸ್ಥಿತ ಪ್ರಜ್ಞೆಯಿಟ್ಟುಕೊಂಡು ಭಾರತಕ್ಕೆ ಆರ್ಥಿಕವಾಗಿ ಭದ್ರ ಬುನಾದಿ ಹಾಕಿದ ಮೇರು ವ್ಯಕ್ತಿದವರು ಎಂದು ತಿಳಿಸಿದರು.

 

ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿಕೊಂಡು ಉದಾರೀಕರಣ ನೀತಿಗೆ ಹೆಚ್ಚಿನ ಒತ್ತು ಕೊಟ್ಟರು. ಸಮತೋಲನ ಆಡಳಿತ ಕೊಡುವ ಜ್ಞಾನ ವಿವೇಚನ ಅವರಲ್ಲಿತ್ತು. ಗ್ರಾಮೀಣ ಪ್ರದೇಶದ ಬಡವರು ಕೂಲಿ ಹುಡುಕಿಕೊಂಡು ಗುಳೆ ಹೋಗಬಾರದೆನ್ನುವ ಕಾರಣಕ್ಕೆ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರು. ಸರ್ವಪಲ್ಲಿ ಡಾ.ರಾಧಾಕೃಷ್ಣನ್, ಅಬ್ದುಲ್ ಕಲಾಂ. ಡಾ.ಮನಮೋಹನಸಿಂಗ್ ಇವರುಗಳನ್ನು ಎಲ್ಲರೂ ನೆನಪಿಸಿಕೊಳ್ಳಲೇಬೇಕು ಎಂದರು.

ಡಾ.ಎಂ.ಕೆ.ಪ್ರಭುದೇವ್ ಮಾತನಾಡುತ್ತ ಡಾ.ಮನಮೋಹನ್‍ಸಿಂಗ್ ಮಾತು ಬೆಳ್ಳಿ, ಮೌನ ಬಂಗಾರ ಎನ್ನುವ ಗುಣದವರು. ಶಿಕ್ಷಣ, ಸಾಮಾಜಿಕ, ಆರ್ಥಿಕ ತಜ್ಞರಾಗಿದ್ದರು. ಸಾಮಾನ್ಯ ಬಡ ಕುಟುಂಬದಿಂದ ಬಂದ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಸವಾಲು ಸಮಸ್ಯೆಗಳ ನಡುವೆಯೆ ಎರಡು ಬಾರಿ ದೇಶದ ಪ್ರಧಾನಿಯಾಗಿ ಆರ್ಥಿಕ ಸಮತೋಲನವನ್ನು ಸುಸ್ಥಿತಿಯಲ್ಲಿಟ್ಟವರು. ಆರ್ಥಿಕ ಜ್ಞಾನಿ, ವಿಜ್ಞಾನಿಯಾಗಿದ್ದ ಸಿಂಗ್‍ರವರು ದೇಶವನ್ನು ಆರ್ಥಿಕ ಅಭಿವೃದ್ದಿಗೆ ಕಡೆಗೆ ತೆಗೆದುಕೊಂಡು ಹೋದರು ಎಂದು ನೆನಪಿಸಿಕೊಂಡರು.

ನಿವೃತ್ತ ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಹೆಚ್.ಗೋಪಾಲ್, ಮುಕ್ತ ವೇದಿಕೆ ಸಂಚಾಲಕ ಪ್ರೊ.ಸಿ.ಬಸವರಾಜಪ್ಪ ವೇದಿಕೆಯಲ್ಲಿದ್ದರು. ನಿವೃತ್ತ ಪ್ರಾಚಾರ್ಯರು, ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ, ಯಶೋಧ ರಾಜಶೇಖರಪ್ಪ, ಅಪರಾಧಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್, ನಿವೃತ್ತ ಪ್ರಾಧ್ಯಾಪಕರುಗಳು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *