ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲೂ ಸಾಕಷ್ಟು ಆಲೋಚನೆ ಮಾಡುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಿದರೆ ಗೆಲ್ಲಬಹುದು ಎಂಬ ಆಲೋಚನೆಯಲ್ಲಿದ್ದಾರೆ. ಮೂರು ಪಕ್ಷಗಳು ಗೆಲ್ಲುವ ಕುದುರೆಯನ್ನಷ್ಟೇ ನೋಡುತ್ತಿದ್ದಾರೆ. ಇದೀಗ ಬೆಂಗಳೂರು ಗ್ರಾಮಾಂತರಕ್ಕೆ ಜೆಡಿಎಸ್ ಅಚ್ಚರಿಯ ವ್ಯಕ್ತಿಯನ್ನು ಆಯ್ಕೆ ಮಾಡಿ ಆಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿಯೂ ಡಿಕೆ ಸುರೇಶ್ ಅವರೇ ಸ್ಪರ್ಧೆ ಮಾಡುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ರಾಜಕೀಯದ ಬಗ್ಗೆ ಡಿಕೆ ಸುರೇಶ್ ಕೊಂಚ ಬೇಸರದಲ್ಲಿಯೇ ಮಾತನಾಡಿದ್ದರು. ಆದರೂ ಸಹ, ಲೋಕಸಭಾ ಚುನಾವಣೆ ಹತ್ತಿರವಾದಂತೆ ಆ ರೀತಿಯ ಮಾತುಗಳನ್ನೇನು ಆಡಿಲ್ಲ. ಹೀಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವೇ. ಡಿಕೆ ಸುರೇಶ್ ಅವರನ್ನು ಸೋಲಿಸಲು ಹೆಸರಿರುವಂತ ವ್ಯಕ್ತಿಯನ್ನೇ ನಿಲ್ಲಿಸಲು ಜೆಡಿಎಸ್ ತೀರ್ಮಾನ ಮಾಡಿದೆ ಎನ್ನಲಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರದಿಂದ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲು ನಿರ್ಧರಿಸಿದೆ. ಆದರೆ ಜೆಡಿಎಸ್ ನಿಂದ ಅಲ್ಲ, ಬಿಜೆಪಿ ಪಕ್ಷದಿಂದ. ಮಂಜುನಾಥ್ ಅವರನ್ನು ನಿಲ್ಲಿಸಿದರೆ ಹಲವು ಪ್ರಯೋಜನಗಳು ಇದೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಹೆಸರು ಮಾಡುವ ಮೂಲಕ, ಜನರಿಗೆ ಚಿರಪರಿಚಿತರಾಗಿದ್ದಾರೆ. ಜೊತೆಗೆ ದೊಡ್ಡಗೌಡರ ಅಳಿಯ. ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಹೋದರೂ, ದೇವೇಗೌಡರ ಹಲವು ಹುದ್ದೆಗಳನ್ನು ನಿರ್ವಹಿಸಿರುವ ಅನುಭವ ಅವರಿಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳಿಗೂ ಮತಗಳು ಇವೆ. ಬಿಜೆಪಿಯಿಂದ ಸ್ಪರ್ಧೆಗೆ ಇಳಿಯುತ್ತಿರುವ ಕಾರಣ, ಕುಟುಂಬ ರಾಜಕಾರಣದ ಹಣೆಪಟ್ಟಿಯೂ ಅಂಟುವುದಿಲ್ಲ. ಹೀಗಾಗಿ ಡಾ. ಮಂಜುನಾಥ್ ಅವರನ್ನು ಬಿಜೆಪಿ ಮೂಲಕ ಕಣಕ್ಕೆ ಇಳಿಸುವ ತೀರ್ಮಾನ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.