ವಸತಿ ಶಾಲೆ ಅವ್ಯವಸ್ಥೆಗೆ ಡಾ.ಹೆಚ್.ಕೃಷ್ಣ ಅಸಮಧಾನ

4 Min Read

 

ಚಿತ್ರದುರ್ಗ.ಡಿ.30: ಕರ್ನಾಟಕ ರಾಜ್ಯ ಆಹಾರ ಆಯೋಗದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಾಗಿದೆ. ಡಿ.31 ರಂದು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಆಯೋಗ ವಾಸ್ತವ್ಯ ಇರಲಿದ್ದು, ಜಿಲ್ಲೆಯ ಪಡಿತರ ವಿತರಣೆ, ಅಂಗನವಾಡಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿನ ಆಹಾರ ಸರಬರಾಜು ಕುರಿತು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಯೋಗಕ್ಕೆ ನೇರವಾಗಿ ದೂರು ಸಲ್ಲಿಸಬಹುದು ಎಂದು ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಹೇಳಿದರು.

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಭೇಟಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸರ್ಕಾರ 14 ಇಲಾಖೆಗಳ ವ್ಯಾಪ್ತಿಗೆ ಬರುವಂತಹ ಆಹಾರ ವಿತರಣೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಆಯೋಗ ಮೇಲ್ವಿಚಾರಣೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ದುರ್ಬಲ ವರ್ಗದ ಜನರಿಗೆ ದೊರಕಬೇಕಾದ ಆಹಾರದ ಹಕ್ಕನ್ನು ಸಂರಕ್ಷಿಸಲಾಗುತ್ತಿದೆ. ಸಾರ್ವಜನಿಕರಿಂದ ಕೇಳಿ ಬಂದ ದೂರುಗಳ ಆಧಾರದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಆಯೋಗದಿಂದ ಪ್ರವಾಸ ಕೈಗೊಳ್ಳಲಾಗುತ್ತಿದೆ. ಆಯೋಗ ಭೇಟಿ ನೀಡುವ ಜಿಲ್ಲೆಯ ಬಗ್ಗೆ ಮೊದಲೇ ಮಾಹಿತಿ ನೀಡಿದರೆ, ಅಧಿಕಾರಿಗಳು ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಮುಚ್ಚಿಡುವ ಸಂಭವವಿರುತ್ತದೆ. ಈ ಹಿನ್ನಲೆಯಲ್ಲಿ ಅಧಿಕೃತವಾಗಿ ಮಾಹಿತಿ ನೀಡದೆ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಗುರುತಿಸಿ, ಲೋಪ, ಭ್ರಷ್ಟಾಚಾರ ಕಂಡುಬಂದರೆ ಸಂಬಂದಪಟ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಡಾ.ಹೆಚ್.ಕೃಷ್ಣ ತಿಳಿಸಿದರು.

 

ಡಿ.29 ರಿಂದ ಡಿ.31 ವರಗೆ ಆಯೋಗದಿಂದ ಚಿತ್ರದುರ್ಗ ಜಿಲ್ಲೆ ಪ್ರವಾಸ ಕೈಗೊಳ್ಳಲಾಗಿದ್ದು, ಮೊದಲ ದಿನ ಆಹಾರ ಗೋದಾಮು, ಅಂಗನವಾಡಿ, ಇಂದಿರಾ ಗಾಂಧಿ ವಸತಿ ಶಾಲೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳು ಸೇರಿದಂತೆ ಹಲವು ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ  ಹಲವಾರು ಸಮಸ್ಯೆಗಳು ಆಯೋಗಕ್ಕೆ ಕಂಡುಬಂದಿವೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸ್ಪಷ್ಟನೆ ಕೋರಲಾಗಿದೆ ಎಂದು ಡಾ.ಹೆಚ್.ಕೃಷ್ಣ ಹೇಳಿದರು.

 

ವಸತಿ ಶಾಲೆ ಅವ್ಯವಸ್ಥೆಗೆ ಆಯೋಗದ ಅಸಮಧಾನ:

ಸೀಬಾರ ಸಮೀಪದ ಮೇದಾರ ಕೇತೇಶ್ವರ ಮಠದಲ್ಲಿ ಬಾಡಿಗೆ ಪಡೆದು ನಡೆಸುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆಗೆ ಆಯೋಗ ಭೇಟಿ ನೀಡಿತ್ತು. ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ, 350 ಕ್ಕೂ ಹೆಚ್ಚು ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಅಡುಗೆ ಮನೆಯಲ್ಲಿ ಯಾವುದೇ ಶುಚ್ಚಿತ್ವ ಕಾಪಾಡಿಕೊಂಡಿಲ್ಲ. ಗ್ರಂಥಾಲಯ ಹಾಗೂ ಕಂಪ್ಯೂಟರ್ ಸೌಲಭ್ಯ ಸಹ ಇಲ್ಲ. ಸರ್ಕಾರದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಲಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳು ಇಲ್ಲ. ಇದನ್ನು ಗಮನಿಸಿದ ಆಯೋಗ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಂದ ಸ್ಪಷ್ಟನೆ ಕೋರಿದೆ. ಒಂದು ವೇಳೆ ಅಧಿಕಾರಿಗಳ ತಪ್ಪು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳೂವುದಾಗಿ ಡಾ.ಹೆಚ್.ಕೃಷ್ಣ ಹೇಳಿದರು.

 

ಜಿಲ್ಲಾ ಮಟ್ಟದ ಅಧಿಕಾರಿ ನೇಮಕಕ್ಕೆ ನಿರ್ದೇಶನ:
ಜಿಲ್ಲೆಯಲ್ಲಿ ಆಹಾರ ಸರಬರಾಜು ಹಾಗೂ ವಿತರಣೆಯಲ್ಲಿ ಲೋಪದೋಷಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕುಂದು ಕೊರತೆ ನಿವಾರಣಾ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಿಸಲು ಅವಕಾಶವಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕಾರ್ಯಭಾರ ನೋಡಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿದ್ದಾರೆ. ಇದೇ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಕುಂದು ಕೊರತೆ ನಿವಾರಣೆ ಅಧಿಕಾರಿಯನ್ನು ನೇಮಿಸಲು ಆಯೋಗದಿಂದ ನಿರ್ದೇಶನ ನೀಡುವುದಾಗಿ ಡಾ.ಹೆಚ್.ಕೃಷ್ಣ ತಿಳಿಸಿದರು.

ಆಯೋಗದ ಮಾಹಿತಿ ಫಲಕ ಅಳವಡಿಕೆಗೆ ಸೂಚನೆ:
ನ್ಯಾಯಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಸುಗಮವಾಗಿ ಆಹಾರ ಧಾನ್ಯಗಳ ವಿತರಣೆ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ನಂಬರ್‍ವುಳ್ಳ ಫಲಕಗಳ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಪ್ರತಿ ನ್ಯಾಯಬೆಲೆ ಅಂಗಡಿಗಳು ಮಂಗಳವಾರ ಹೊರತುಪಡಿಸಿ ಪ್ರತಿದಿನವು ಬಾಗಿಲು ತೆರಯಬೇಕು. ಒಂದು ದೇಶ ಹಾಗೂ ಒಂದು ಪಡಿತರ ಚೀಟಿ ವ್ಯವಸ್ಥೆ ಜಾರಿಯಲ್ಲಿದೆ. ಯಾರೇ ವಲಸಿಗ ಕಾರ್ಮಿಕರು ಹತ್ತಿರದ ಪಡಿತರ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದು. ಉಚಿತ ಆಹಾರ ಧಾನ್ಯಗಳೊಂದಿಗೆ ಸೋಪು, ಎಣ್ಣೆ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಒತ್ತಾಯ ಮಾಡುವಂತಿಲ್ಲ ಎಂದು ಡಾ.ಹೆಚ್.ಕೃಷ್ಣ ಸ್ಪಷ್ಟಪಡಿಸಿದರು.

ಬಿಪಿಎಲ್ ಕಾರ್ಡು ರದ್ದತಿ ಕುರಿತು ಅಹವಾಲು ಸ್ವೀಕಾರ:
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ವರ್ಷಕ್ಕೆ ರೂ.8 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವವರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತಿದ್ದು, ಇದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಪೇಟಿಎಂ, ಫೋನ್ ಪೇ ಮೂಲಕ ಸಣ್ಣಪುಟ್ಟ ವ್ಯಾಪಾರಸ್ಥರು ಸಹ ಹಣ ಪಾವತಿ ಪಡೆಯುವುದರಿಂದ ವರ್ಷಕ್ಕೆ ಅವರ ವಹಿವಾಟು ರೂ.8 ಲಕ್ಷ ಮೀರುತ್ತದೆ. ಬಹಳ ಕಡಿಮೆ ಲಾಭದೊಂದಿಗೆ ವ್ಯವಹರಿಸುವ ಇವರಿಗೆ ಬಿಪಿಎಲ್ ಕಾರ್ಡು ರದ್ದತಿಯಿಂದ ತೊಂದರೆಯಾಗುತ್ತಿದೆ. ಈ ಕುರಿತು ಆಯೋಗ ಹೆಚ್ಚಿನ ಗಮನ ಹರಿಸಿದ್ದು, ನಿಯಮಗಳಿಗೆ ಸೂಕ್ತ ಮಾರ್ಪಾಡುಗಳನ್ನು ತರಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಡಾ.ಹೆಚ್.ಕೃಷ್ಣ ತಿಳಿಸಿದರು.

ಕಡ್ಡಾಯ ಮೊಟ್ಟೆ ವಿತರಣೆಗೆ ಸೂಚನೆ:
ಕೆಲವು ಶಾಲೆಗಳಲ್ಲಿ ಬಿಸಿಯೂಟದ ಸಂದರ್ಭದಲ್ಲಿ ಮೊಟ್ಟೆ ವಿತರಣೆ ಮಾಡದಿರುವುದು ಆಯೋಗದ ಗಮನಕ್ಕೆ ಬಂದಿದೆ. ಪೌಷ್ಠಿಕ ಆಹಾರವಾದ ಮೊಟ್ಟೆ, ಮಕ್ಕಳ ದೈಹಿಕ ಬೆಳವಣಿಗೆಗೆ ಅಗತ್ಯವಾಗಿದೆ. ಶಾಲೆಗಳಲ್ಲಿ ತಾರತಮ್ಯ ಮಾಡದೆ ಕಡ್ಡಾಯವಾಗಿ ಮೊಟ್ಟೆ ವಿತರಣೆಗೆ ಆಯೋಗದಿಂದ ಸೂಚನೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿಯರು ಹಾಗೂ 3 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಈ ಆಹಾರದ ಗುಣಮಟ್ಟ ಕಾಪಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಡಾ.ಹೆಚ್.ಕೃಷ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಮಾರುತಿ ಎಂ. ದೊಡ್ಡಲಿಂಗಣ್ಣನವರ, ಕೆ.ಎಸ್.ವಿಜಯಲಕ್ಷ್ಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕೆ.ಎಸ್.ಸಿ.ಎಸ್.ಇ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Share This Article