ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.08 : ನಿಮ್ಮ ಸಮಸ್ಯೆಗಳ ಜೊತೆ ಸದಾ ನಾವಿರುತ್ತೇವೆ. ಕಾನೂನು ಪರಿಪಾಲನೆ ಮಾಡಿ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಟ್ರಾಕ್ಟರ್ ಮಾಲೀಕರುಗಳಿಗೆ ತಿಳಿಸಿದರು.
ಮೆದೇಹಳ್ಳಿ ರಸ್ತೆಯಲ್ಲಿರುವ ರಾಮತೀರ್ಥ ಆಶ್ರಮ ಟ್ರಸ್ಟ್ ಹತ್ತಿರ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಟ್ರಾಕ್ಟರ್ ಮಾಲೀಕರ ಸಂಘ ಉದ್ಘಾಟಿಸಿ ಮಾತನಾಡಿದರು.
ಕೆಲವೊಮ್ಮೆ ನೀವುಗಳು ಟ್ರಾಕ್ಟರ್ ನಲ್ಲಿ ಜೆಲ್ಲಿ, ಮರಳು, ಇಟ್ಟಿಗೆಗಳನ್ನು ಸಾಗಿಸುತ್ತಿರುವಾಗ ಸಂಬಂಧಪಟ್ಟವರು ಹಿಡಿದು ತಪಾಸಣೆ ನಡೆಸಿ ದಾಖಲೆ ಹಾಗೂ ಪರ್ಮಿಟ್ ಇಲ್ಲದಿದ್ದರೆ ದಂಡ ವಿಧಿಸುವುದು ಸಹಜ. ಹಾಗಾಂತ ಮಿತಿ ಮೀರಿ ದಂಡವನ್ನು ವಿಧಿಸಬಾರದು. ಕೆಲವೊಮ್ಮೆ ವಾರ್ನಿಂಗ್ ಮಾಡಿ ಕಳಿಸಬೇಕು.
ಇಲಾಖೆಯವರ ಸಹಕಾರ ನಿಮಗಿರಬೇಕು. ನಿಮ್ಮ ಸಹಕಾರ ಇಲಾಖೆಯವರಿಗಿರಬೇಕು. ಡಾ.ಬಿ.ಆರ್.ಅಂಬೇಡ್ಕರ್‍ರವರ ಹೆಸರಿನಲ್ಲಿ ಸಂಘ ಕಟ್ಟಿದ್ದೀರಿ ಖಂಡಿತ ನಿಮಗೆ ಒಳ್ಳೆಯದಾಗುತ್ತದೆ ಎಂದು ಹಾರೈಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಭಾರತದಲ್ಲಿ ಅನೇಕ ಜಾತಿ, ಧರ್ಮ, ಭಾಷೆಗಳಿವೆ, ಎಲ್ಲರೂ ಅವರವರ ಸಂಸ್ಕøತಿಯನ್ನು ಆಚರಿಸುವುದರಲ್ಲಿ ತಪ್ಪಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳು ಬಂದಾಗ ಸರಿಪಡಿಸಿಕೊಂಡು ಬದುಕಬೇಕು. ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ಇರುವುದರಿಂದ ಭಾರತ ಒಗ್ಗಟ್ಟಾಗಿದೆ. ನೆಹರು ಅಂಬೇಡ್ಕರ್‍ಗೆ ವ್ಯತ್ಯಾಸ ಬಂದಾಗ ಅಂಬೇಡ್ಕರ್ ಮಂತ್ರಿ ಸ್ಥಾನ ತ್ಯಜಿಸಿ ಹೊರಬಂದರು. ಮಹಿಳೆಯರಿಗೆ ಹಿಂದೂ ಕೋಡ್‍ಬಿಲ್ ತಂದಾಗ ಪಾರ್ಲಿಮೆಂಟ್‍ನಲ್ಲಿ ಬಿದ್ದೋಗುತ್ತದೆ. ಚುನಾವಣೆಯಲ್ಲಿ ಅಂಬೇಡ್ಕರ್‍ರನ್ನು ಸೋಲಿಸಿದವರು ಕಾಂಗ್ರೆಸ್‍ನವರು ಎನ್ನುವುದನ್ನು ನೆನಪಿಸಿಕೊಂಡರು.
ಮಡಿವಾಳ ಗುರುಪೀಠದ ಡಾ. ಬಸವ ಮಡಿವಾಳ ಮಾಚಿದೇವಸ್ವಾಮೀಜಿ ಮಾತನಾಡುತ್ತ ಶ್ರಮಿಕ ವರ್ಗ ಚನ್ನಾಗಿರಬೇಕು. ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹಾಗೂ ಅವರ ಸಮಕಾಲೀನರ ಕಾಲದಲ್ಲಿ ಜಾತಿಯತೆ ಇರಲಿಲ್ಲ. ಕಾಯಕದ ಮೇಲೆ ಬದುಕಿದ್ದಂತ ಶ್ರಮಿಕ ವರ್ಗದವರಿದ್ದರು. ಜಾತಿಯಿಂದ ಬದುಕಲು ಯಾರಿಂದಲೂ ಆಗಲ್ಲ. ಸಮೃದ್ದ ಕಾಲ ಅದು. ಪ್ರಾಮಾಣಿಕವಾಗಿ ಎಲ್ಲರೂ ದುಡಿದು ಊಟ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಚಾಲಕರುಗಳೆಂದು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಯಾರು ಕೆಲಸಗಾರರೆ ಸಿಗುವುದಿಲ್ಲ. ರೈತ ಹೇಗೆ ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೋ ಅದೇ ರೀತಿ ಚಾಲಕ ರೈತನ ಬೆನ್ನೆಲುಬು ಎನ್ನಬೇಕಾಗುತ್ತದೆ. ಟ್ರಾಕ್ಟರ್ ಚಾಲನೆ ಕಲಿತರೆ ಎಲ್ಲಾ ವಾಹನಗಳನ್ನು ಓಡಿಸಬಹುದು. ಟ್ರಾಕ್ಟರ್ ಮಾಲೀಕರು ಹಾಗೂ ಚಾಲಕರುಗಳು ಮೊದಲು ಸಂಘಟನೆಯಾದರೆ ಎಲ್ಲರೂ ನಿಮ್ಮನ್ನು ನೋಡಿ ಹೆದರುತ್ತಾರೆಂದು ಡಾ.ಬಿ.ಆರ್.ಅಂಬೇಡ್ಕರ್ ಟ್ರಾಕ್ಟರ್ ಮಾಲೀಕರ ಸಂಘದವರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಮಾತನಾಡಿ ಹೋರಾಟದ ಕಿಚ್ಚನ್ನು ಕೊಟ್ಟಿದ್ದು, ಡಾ.ಬಿ.ಆರ್.ಅಂಬೇಡ್ಕರ್. ಸಂವಿಧಾನದ ಮೂಲಕ ಎಲ್ಲರಿಗೂ ಕಾನೂನು ನೀಡಿದ್ದಾರೆ. ಅದನ್ನು ಪಾಲನೆ ಮಾಡಿ ಟ್ರಾಕ್ಟರ್ ಮಾಲೀಕರು, ಚಾಲಕರು, ಗುತ್ತಿಗೆದಾರರು ಜಾಸ್ತಿಯಾಗಿದ್ದಾರೆ. ಒಳಜಗಳ ಸರಿಯಲ್ಲ. ಸಂಘಟಿತರಾಗಿ. ಸಂಘ ಉಳಿದರೆ ನೀವುಗಳು ಬದುಕುತ್ತೀರ. ಕ್ರಷರ್ ಮಾಲೀಕರುಗಳು ಮಾನವೀಯತೆಯಿಟ್ಟುಕೊಳ್ಳಬೇಕು. ಡಿ.ಎಲ್. ಪರ್ಮಿಟ್ ಇಟ್ಟುಕೊಳ್ಳಿ. ಏನಾದರೂ ತೊಂದರೆಯಾದಾಗ ಡಿ.ಎಂ.ಜಿ.ಯವರಲ್ಲಿ ಕಷ್ಟ ಹೇಳಿಕೊಳ್ಳಿ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಹೆಜ್ಜೆಯಲ್ಲಿ ಸಾಗಿ ಎಂದು ಹೇಳಿದರು.
ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಮಜೀದ್, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮರೆಡ್ಡಿ ಎಂ.ಜಿ. ಇವರುಗಳು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಚಿದಾನಂದ, ಕಾರ್ಯದರ್ಶಿ ಶಶಿಧರ, ಖಜಾಂಚಿ ಸ್ವಾಮಿ ವೇದಿಕೆಯಲ್ಲಿದ್ದರು.