ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ(ಡಿ.27): ಡಿಸೆಂಬರ್ 28 ರಂದು ಬೆಳಗ್ಗೆ 8-30ಕ್ಕೆ ಚಿತ್ರದುರ್ಗ ತಾಲ್ಲೂಕಿನ ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿನಾಡು ಗ್ರಾಮದಲ್ಲಿ ನೂತನ ಕಾರ್ಯಕ್ರಮವಾದ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮನೆ ಮಾಲೀಕರ ಮನೆ ಬಾಗಿಲಿಗೆ, ಅವರ ಆಸ್ತಿಗೆ ಸಂಬಂಧಿಸಿದ ಇ –ಸ್ವತ್ತು ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ಇದೊಂದು ರಾಜ್ಯದಲ್ಲಿಯೇ ಮೊದಲ ಬಾರಿಗೆ, ಮನೆ ಬಾಗಿಲಿಗೆ ಇ –ಸ್ವತ್ತು ವಿತರಣೆ ಮಾಡುವ ವಿನೂತನ ಕಾರ್ಯಕ್ರಮವಾಗಿದ್ದು, ಗುತ್ತಿನಾಡು ಗ್ರಾಮದಲ್ಲಿ ಅಧಿಕೃತವಾಗಿ ಪ್ರಾರಂಭ ಮಾಡಿ, ಇಡೀ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಲಾಗುವುದು.
ಇ –ಸ್ವತ್ತು ಪ್ರಮಾಣ ಪತ್ರ ವಿತರಣಾ ಸಂದರ್ಭದಲ್ಲಿ ಸಾಕಷ್ಟು ವಿಳಂಬ ಹಾಗೂ ಸಾರ್ವಜನಿಕರಿಂದ ದೂರು ಅರ್ಜಿಗಳು ಬರುತ್ತಿದ್ದರಿಂದ, ನಮ್ಮ ಜಿಲ್ಲೆಯಲ್ಲೂ ಸಹ ಕೆಲವು ಗ್ರಾಮ ಪಂಚಾಯಿತಿಗಳ ಸಾರ್ವಜನಿಕರಿಂದ ದೂರು ಅರ್ಜಿಗಳು ಬಂದಿದ್ದರಿಂದ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರ ಮಧ್ಯೆ ಒಂದು ಉತ್ತಮ ಸಂಬಂಧ ಏರ್ಪಡಲು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ಕಂದಾಯ ವಸೂಲಿಯಾಗಲು ಮತ್ತು ಸಾರ್ವಜನಿಕರಿಗೆ ವಿಳಂಬವಿಲ್ಲದೇ ಸರ್ಕಾರದ ಸೇವೆಯನ್ನು ನೀಡುವ ಉದ್ದೇಶಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರು ಹಾಗೂ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಅವರು ಕೋರಿದ್ದಾರೆ.