ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.16) : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತಗಳಿಂದ ಜಯಶಾಲಿಯಾದ ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಫಲಿತಾಂಶ ಪ್ರಕಟಗೊಂಡ ನಾಲ್ಕನೆ ದಿನವೆ ಪ್ರಥಮ ಬಾರಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಸುಧಾರಣೆಯಾಗಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಖಡಕ್ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಸ್ಪತ್ರೆಗೆ ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಭೇಟಿ ನೀಡುವ ಮುನ್ಸೂಚನೆ ಅರಿತ ನೂರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಮಾಯಿಸಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ಜಿಲ್ಲಾಸ್ಪತ್ರೆಯೊಳಗೆ ಪ್ರವೇಶಿಸಿದ ಶಾಸಕರು ನೇರವಾಗಿ ಮೊದಲು ಶೌಚಾಲಯಗಳನ್ನು ವೀಕ್ಷಿಸಿ ಸ್ವಚ್ಚವಾಗಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ನೀರಿಗೆ ಕೊರತೆಯಾಗಬಾರದು. ಮೊದಲೇ ಬಡ ಜಿಲ್ಲೆ ಚಿತ್ರದುರ್ಗದಲ್ಲಿ ಸಿರಿವಂತರು ಯಾರೂ ಸರ್ಕಾರಿ ಆಸ್ಪತ್ರೆಗೆ ಬರುವುದಿಲ್ಲ. ಇಲ್ಲಿ ದಾಖಲಾಗುವ ರೋಗಿಗಳಿಗೆ ಹೊರಗಿನಿಂದ ಔಷಧಿ ತರುವಂತೆ ಚೀಟಿ ಬರೆದುಕೊಡುವ ಪದ್ದತಿ ನಿಲ್ಲಬೇಕು. ಲಂಚದ ಹಾವಳಿ ಮಿತಿ ಮೀರಿದೆ ಎನ್ನುವ ದೂರುಗಳು ಸಾಕಷ್ಟು ಕೇಳಿ ಬರುತ್ತಿದೆ. ಇಲ್ಲಿಯವರೆಗೂ ಹೇಗಿತ್ತು ಎನ್ನುವುದು ಬೇಡ. ಇನ್ನು ಮುಂದೆ ಸುಧಾರಣೆಯಾಗಬೇಕು. ಯಾವುದೇ ಕಾರಣಕ್ಕೂ ರೋಗಿಗಳನ್ನು ಅಲೆದಾಡಿಸಬೇಡಿ. ದೂರದ ಬೆಂಗಳೂರು, ದಾವಣಗೆರೆ, ಮಣಿಪಾಲ್‍ಗೆ ಸಾಗಿಸುವಂತೆ ವೈದ್ಯರು ಶಿಫಾರಸ್ಸು ಮಾಡುವುದು ನಿಲ್ಲಬೇಕು. ಸಾಧ್ಯವಾದಷ್ಟು ಇಲ್ಲಿಯೇ ಚಿಕಿತ್ಸೆ ದೊರಕಬೇಕು. ಎಕ್ಸರೆ, ಸ್ಕ್ಯಾನಿಂಗ್ ಯಂತ್ರಗಳು ಏನಾದರೂ ಕೆಟ್ಟಿದ್ದರೆ ನನ್ನ ಗಮನಕ್ಕೆ ತನ್ನಿ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ಕೊಟ್ಟರು. ಕಣ್ಣಿನ ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಮೇಜರ್ ಓಟಿಗೂ ಭೇಟಿ ನೀಡಿ ವೀಕ್ಷಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ್, ನಿವಾಸಿ ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್ ಹಾಗೂ ಸಿಬ್ಬಂದಿಯವರು ಈ ಸಂದರ್ಭದಲ್ಲಿದ್ದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ಇಂಟೆಕ್ ಅಧ್ಯಕ್ಷ ಅಶೋಕ್ ನಾಯ್ಡು, ಸೈಯದ್ ಖುದ್ದೂಸ್ ಇನ್ನು ಅನೇಕರು ಉಪಸ್ಥಿತರಿದ್ದರು.