ಮುಸಲ್ಮಾನರಿಗೆ 4% ಮೀಸಲಾತಿ ವಿಧೇಯಕಕ್ಕೆ ಒಪ್ಪಿಗೆ ನೀಡಬೇಡಿ : ವಿಶ್ವ ಹಿಂದು ಪರಿಷತ್ – ಬಜರಂಗದಳ ಆಗ್ರಹ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 26 :
ಕರ್ನಾಟಕ ಸರ್ಕಾರ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ವಿಶ್ವ ಹಿಂದು ಪರಿಷತ್ ಬಜರಂಗದಳ ರಾಜ್ಯಪಾಲರಾದ ತಾವರ್ ಚಂದ್ ಗೆಹೋಟ್ ಜೀ ಅವರನ್ನು ಜಿಲ್ಲಾಧಿಕಾರಿಗಳ ಮೂಲಕ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಕೆಟಿಟಿಪಿ ಕಾಯಿದೆಯಲ್ಲಿನ ತಿದ್ದುಪಡಿಯು 2 ಕೋಟಿ ರೂ.ವರೆಗಿನ ಸಿವಿಲ್ ವಕ್ರ್ಸ್ ಗುತ್ತಿಗೆಗಳಲ್ಲಿ ಮತ್ತು 1 ಕೋಟಿ ರೂ.ವರೆಗಿನ ಸರಕು ಮತ್ತು ಸೇವಾ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿಯನ್ನು ಅನುಮತಿಸುತ್ತದೆ. ಕೆಟಿಟಿಪಿ ಕಾಯಿದೆಗೆ ಕರ್ನಾಟಕ ಸಚಿವ ಸಂಪುಟ ಕಳೆದ ವಾರ ತಿದ್ದುಪಡಿ ಮಾಡಿ ಅನುಮೋದನೆ ನೀಡಿದೆ.

 

ಸಂವಿಧಾನದ ಆರ್ಟಿಕಲ್ 15 ನಿರ್ದಿಷ್ಟವಾಗಿ ರಾಜ್ಯವು ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರಿಕರ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಸಂವಿಧಾನ ರಚಿಸುವಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ವಿವಿಧ ರಾಜ್ಯಗಳಲ್ಲಿ, ಧರ್ಮಾಧಾರಿತ ಮೀಸಲಾತಿಯನ್ನು ಒದಗಿಸಲು ಇದೇ ರೀತಿಯ ಪ್ರಯತ್ನಗಳು ನಡೆದಾಗ ನ್ಯಾಯಾಲಯಗಳು ತಿರಸ್ಕರಿಸಿವೆ. ಹೀಗಿದ್ದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ನೀಡುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ.

ಸುಪ್ರೀಂ ಕೋರ್ಟ್ ಕೂಡ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ರದ್ದುಗೊಳಿಸಿದೆ. ಮೀಸಲಾತಿ ಪ್ರಯೋಜನಗಳಿಗಾಗಿ 77 ಸಮುದಾಯಗಳನ್ನು ಒಬಿಸಿ ಎಂದು ವರ್ಗೀಕರಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದ್ದರಿಂದ ಧರ್ಮಾಧಾರಿತ ಮೀಸಲಾತಿಯು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದ, ಯಾವುದೇ ಕಲ್ಯಾಣ ಉದ್ದೇಶವಿಲ್ಲದ ಅಸಂವಿಧಾನಿಕ ಮೇಲಿನ ಮಸೂದೆಗೆ ಒಪ್ಪಿಗೆ ನೀಡದಂತೆ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ

ಕರ್ನಾಟಕದಲ್ಲಿ ಆಡಳಿತಾರೂಢ ಸರ್ಕಾರದ ವೋಟ್ ಬ್ಯಾಂಕ್ ಆಗಿರುವ ಸಮುದಾಯವನ್ನು ಸಮಾಧಾನಪಡಿಸಲು. ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸುವ ಕಾರ್ಯವು ರಾಷ್ಟ್ರೀಯ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟುಮಾಡುತ್ತದೆ. ಈ ನಿಟ್ಟಿನಲ್ಲಿ, ಮಸೂದೆಯನ್ನು ಅನುಮೋದಿಸದೇ ತಡೆ ಹಿಡಿಯಬೇಕೆಂದು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಬಜರಂಗದಳದ ನಗರ ಸಂಯೋಜಕ್ ದೀಪಕ್ ರಾಜ್, ನಗರ ಸಹ ಸಂಯೋಜಕ್ ಕಿಶೋರ್ ಗ್ರಾಮಾಂತರ ಸಹ ಸಂಯೋಜಕ ದರ್ಶನ್‍ಯೋಗಿ ದರ್ಶನ್ ತಮಟ್ಕಲ್ಲು ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *