ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ ಜ. 30 : ಕುಷ್ಠ ರೋಗದ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸಕಾಲದಲ್ಲಿ ಇದಕ್ಕೆ ಚಿಕಿತ್ಸೆ ಪಡೆದಲ್ಲಿ, ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣು ಪ್ರಸಾದ್ ಹೇಳಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೋಮವಾರದಂದು ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಜಾಥ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಬಳಿಕ ಈ ಕುರಿತು ಮಾತನಾಡಿದರು.
ಕುಷ್ಠರೋಗ ಸಂಪೂರ್ಣ ಗುಣಮುಖ ಹೊಂದುವ ಖಾಯಿಲೆ, ಕುಷ್ಠರೋಗವನ್ನು ಶೀಘ್ರ ಪತ್ತೆ ಹಚ್ಚಿ ನಿಗಧಿತ ಸಂಪೂರ್ಣ ಚಿಕಿತ್ಸೆಯನ್ನು ಪಡೆದು ನಿಯಮಿತ ವ್ಯಾಯಾಮ ಮಾಡಿದಲ್ಲಿ ಕುಷ್ಠರೋಗದಿಂದ ಸಂಪೂರ್ಣ ಗುಣಮುಖ ಹೊಂದಬಹುದು. ಬಹುವಿಧ ಔಷಧಿ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಿ, ಕುಷ್ಠರೋಗಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ನೀಡೋಣ ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾದಲ್ಲಿ “ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ” ಎಂಬ ಘೋಷಣೆಯೊಂದಿಗೆ, ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ಬಿ ಹನುಮಂತಪ್ಪ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್, ಮೂಗಪ್ಪ, ಡಿ.ಎಲ್.ಒ ಕಛೇರಿ ಡಿ.ಎನ್.ಟಿ ತಂಡದ ಮೇಲ್ವಿಚಾಕರಾದ ವೈ.ತಿಪ್ಪೇಶಿ, ಕೆ.ರಾಜೇಂದ್ರ ಪ್ರಸಾದ್, ಚಂದ್ರಪ್ಪ ಎಂ, ಕಿರಣ್ ಯು, ಮಂಜುನಾಥ್ ಪಿ.ಎಂ.ಡಬ್ಲೂ, ಆಶಾ ಕಾರ್ಯಕರ್ತೆಯರು ಮತ್ತು ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.