ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದ್ದಕ್ಕಿದ್ದ ಹಾಗೇ ಉಸಿರಾಟದಲ್ಲಿ ಏರುಪೇರಾದ ಕಾರಣ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಾ. ಸತ್ಯನಾರಾಯಣ ನೇತೃತ್ವದ ತಂಡದಿಂದ ದೊಡ್ಡಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ದೇವೇಗೌಡರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಇರುವ ಕಾರಣ ದೇವೇಗೌಡರು ಕೂಡ ಫುಲ್ ಆಕ್ಟೀವ್ ಆಗಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾರಣ, ಪಡೆದ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು, ಬಿಜೆಪಿ ನಾಯಕರೂ ಗೆಲ್ಲುವಂತೆ ಮಾಡುವುದು ಜವಾಬ್ದಾರಿ ಇದೆ. ಹೀಗಾಗಿ ಈ ವಯಸ್ಸಿನಲ್ಲೂ ಬಿಡುವಿಲ್ಲದಂತೆ ಓಡಾಡಿದ್ದಾರೆ. ಕ್ಷೇತ್ರಗಳ ಹಂಚಿಕೆ, ಅಭ್ಯರ್ಥಿ, ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ದೆಹಲಿಗೆ ಪ್ರಯಾಣ ಬೆಳೆಸಿ ಬಂದಿದ್ದರು. ದೆಹಲಿಯಲ್ಲಿ ಮೊದಲೇ ಹೆಚ್ಚಿನ ಚಳಿಯ ವಾತಾವರಣವಿದೆ. ಹೀಗಾಗಿ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದರು. ಅತಿಯಾದ ಕೆಮ್ಮಿನಿಂದ ಶ್ವಾಸಕೋಶದಲ್ಲಿ ಸಮಸ್ಯೆ ಆಗಿತ್ತು. ಇದರ ಪರಿಣಾಮ ಉಸಿರಾಟಕ್ಕೂ ತೊಂದರೆ ಆಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಯಲ್ಲೇ ಇರಲು ಸೂಚನೆ ನೀಡಿದ್ದಾರೆ. ಗಾಬರಿ ಆಗೋ ಅಗತ್ಯ ಇಲ್ಲ. ದೇವೇಗೌಡರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.