ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ, ಜುಲೈ.01 : ಆಸ್ಪತ್ರೆಗೆ ಬರುವ ರೋಗಿಗಳ ಪ್ರಾಣ ಉಳಿಸುವ ಪರಮ ಪವಿತ್ರವಾದ ವೃತ್ತಿಗೆ ಜನರು ಗೌರವ ನೀಡುವಂತೆ ನೀವುಗಳು ನಡೆದುಕೊಳ್ಳಬೇಕೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ವೈದ್ಯರುಗಳಿಗೆ ಕರೆ ನೀಡಿದರು.
ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಡಾ.ಬಿಂಧನ್ ಚಂದ್ರರಾಯ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ವೈದ್ಯರನ್ನು ಜನ ದೇವರಂತೆ ಕಾಣುತ್ತಾರೆ. ಪರಮ ಪವಿತ್ರವಾದ ವೃತ್ತಿ ನಿಮ್ಮದು. ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ವೈದ್ಯರುಗಳಾದ ನಿಮ್ಮ ಕೈಯಲ್ಲಿ ಜನರ ಪ್ರಾಣ ಉಳಿಸಬಹುದು. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಎಂದು ತಾಕೀತು ಮಾಡಿದರು.
ಒತ್ತಡ, ಸಮಸ್ಯೆ, ಪರಿಸ್ಥಿತಿಗನುಗುಣವಾಗಿ ಪ್ರತಿಯೊಬ್ಬರಿಗೂ ಕಾಯಿಲೆ ಬರುವುದು ಸಹಜ. ದಿನನಿತ್ಯವು ವ್ಯಾಯಾಮ, ವಾಯು ವಿಹಾರ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಸೇವೆಗೆ ಮಹತ್ವ ಕೊಡುವ ದಿನ ಇದಾಗಿರುವುದರಿಂದ ವೈದ್ಯರುಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ತಿಳಿಸಿದರು.
ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ವಿನಯ್ ಪಿ.ಸಜ್ಜನ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎನ್.ಶಿವಮೂರ್ತಿ, ಗೌರವಾಧ್ಯಕ್ಷ ಎಸ್.ಮಾರುತೇಶ್, ಡಾ.ಶಿವಲಿಂಗಪ್ಪ, ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ಸುಮಿತ್ರಕ್ಕ, ಗಂಗಾಧರಪ್ಪ, ಕವಿ ಸಿದ್ದವ್ವನಹಳ್ಳಿ ವೀರೇಶ್‍ಕುಮಾರ್, ಜೆ.ಎ.ದೇವರಾಜಯ್ಯ, ವೈದ್ಯಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.