ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಮೇಲೆ ಹೊಣೆಗಾರಿಕೆಯಿದೆ ಎಂದು ಡಾ.ಸುಪ್ರಿಯಾ ಪ್ರಶಾಂತ್ ತಿಳಿಸಿದರು.
ನ್ಯಾಷನಲ್ ಇಂಗ್ಲಿಷ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದರು.
ಬಿ.ಸಿ.ರಾಯ್ ಸ್ಮರಣಾರ್ಥ ಪ್ರತಿ ವರ್ಷವೂ ಜುಲೈ 01 ರಂದು ವೈದ್ಯರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಎಲ್ಲರ ಜೀವನದಲ್ಲಿ ಆರೋಗ್ಯಕ್ಕೆ ಪ್ರಾಮುಖ್ಯತೆಯಿದೆ. ಹಾಗಾಗಿ ವೈದ್ಯರ ವೃತ್ತಿ ಅತ್ಯಂತ ಪವಿತ್ರವಾದುದು. ಮಕ್ಕಳು ಶಿಕ್ಷಣದ ಕಡೆ ಹೆಚ್ಚಿನ ಗಮನಕೊಟ್ಟಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್‍ಪಾಷ ನೆಸ್ಟ್ ಮಾಂಟೆಸರಿ ವಿಭಾಗ ಉದ್ಘಾಟಿಸಿ ಮಾತನಾಡುತ್ತ ವೈದ್ಯರಿಗೂ ಶಾಲೆಗೂ ಸಂಬಂಧವಿದೆ.
ಏಕೆಂದರೆ ಚಿಕ್ಕಂದಿನಿಂದಲೆ ಚೆನ್ನಾಗಿ ಓದಿದರೆ ಮಾತ್ರ ಮುಂದೆ ವೈದ್ಯರಾಗಬಹುದು. ರೋಗಿಯ ಕಾಯಿಲೆಯನ್ನು ವಾಸಿ ಮಾಡುವ ವೈದ್ಯರು ಹಾಗೂ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರುಗಳು ತಾಳ್ಮೆಯಿಂದಿರಬೇಕೆಂದು ಸಲಹೆ ನೀಡಿದರು.
ಶಾಲೆಯ ಸಂಸ್ಥಾಪಕ ಆಡಳಿತಾಧಿಕಾರಿ ಸೈಯದ್ ಅಖ್ತರ್, ಕಾರ್ಯದರ್ಶಿ ಡಾ.ಸಯೀದನಾಝ್, ನಿರ್ದೇಶಕರಾದ ಸೈಯದ್ ಸುಜಾತ್, ಪ್ರಾಚಾರ್ಯರಾದ ರುಖಯ್ಯ
ಉಪ ಪ್ರಾಂಶುಪಾಲರಾದ ಶಹನಾಜ್‍ಬೇಗಂ, ವ್ಯವಸ್ಥಾಪಕ ಮಹಮದ್ ಇಮ್ರಾನ್ ಇವರುಗಳು ವೇದಿಕೆಯಲ್ಲಿದ್ದರು.
ವೈದ್ಯರ ದಿನಾಚರಣೆ ಪ್ರಯುಕ್ತ ಪುಟಾಣಿ ಮಕ್ಕಳು ವೈದ್ಯರ ದಿರಿಸಿನಲ್ಲಿ ಕಂಗೊಳಿಸುತ್ತಿದ್ದರು.

