ಸುದ್ದಿಒನ್, ಮೊಳಕಾಲ್ಮೂರು, ಮೇ. 21 : ಮಳೆ ಬಂದಾಗ ಒಂದಷ್ಟು ಸಮಸ್ಯೆಗಳಾಗುವುದು ಸಾಮಾನ್ಯ. ವಿದ್ಯುತ್ ಸಮಸ್ಯೆ, ರಸ್ತೆಗಳ ಕುಸಿತ, ನೀರು ತುಂಬಿಕೊಳ್ಳುವುದು. ಇದೆಲ್ಲದಕ್ಕೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲೆಂದೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿರುತ್ತದೆ. ಮಳೆಗಾಲ ಶುರುವಾಗುವುದಕ್ಕೂ ಮುನ್ನವೇ ಒಂದಷ್ಟು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೊಳಕಾಲ್ಮೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತೆ ಆಗಿದೆ.
ತಾಲೂಕಿನಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುರಿದ ತಾಲ್ಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇತ್ತ ಮಳೆಯ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ, ರೋಗಿಗಳು ಹಾಗೂ ವೈದ್ಯರು ಪರದಾಡಿದ್ದಾರೆ.
ಆಸ್ಪತ್ರೆಯಲ್ಲಿ ಅಳವಡಿಸಿದ್ದ ಜನರೇಟರ್ ಕೆಟ್ಟು ವಾರ ಕಳೆದರೂ ರಿಪೇರಿ ಮಾಡಿಲ್ಲ. ಇತ್ತ ಮಳೆಗೆ ಕರೆಂಟ್ ಹೋದ ಹಿನ್ನೆಲೆಯಲ್ಲಿ ವೈದ್ಯರು ಮೊಬೈಲ್ ಟಾರ್ಚ್ ಮತ್ತು ಮೇಣದಬತ್ತಿ ಹಚ್ಚಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯು 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿದೆ. ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಶಾಸಕರಾಗಿದ್ದ ಅವಧಿಯಲ್ಲಿ ಇದೇ ಆಸ್ಪತ್ರೆಯಲ್ಲಿ 23 ಬೆಡ್ ಗಳ ಐಸಿಯು,ಆಕ್ಸಿಜನ್ ಪ್ಲಾಂಟ್,ಏರ್ಪ್ಲೋ ಆಪರೇಶನ್ ಥೇಟರ್,ಎಲ್ಲಾ ಬೆಡ್ ಗಳಿಗೂ ಆಕ್ಸಿಜನ್ ಕನೆಕ್ಟಿವಿಟಿ,12 ಕ್ಕೂ ಹೆಚ್ಚು ತಜ್ಞ ವೈದ್ಯರು,ಜನೌಷಧಿ ಕೇಂದ್ರ ಸ್ಥಾಪನೆ, ಹೆಚ್ಚುವರಿ ಆಂಬ್ಯುಲೆನ್ಸ್ ನಂತಹ ಕಾರ್ಯಗಳನ್ನು ಮಾಡಿದ್ದರು. ಆದರೆ ಈಗ ಮಳೆಯಿಂದಾಗಿ ರೋಗಿಗಳು ಪರದಾಡುವಂತೆ ಆಗಿದೆ. ಸಂಬಂಧಪಟ್ಟವರು ಈಗಲಾದರೂ ಇತ್ತಕಡೆ ಗಮನ ಹರಿಸಬೇಕಿದೆ.