ಈಗಾಗಲೇ ಎನ್ಸಿಇಆರ್ಟಿ ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡಲಾಗಿದೆ. ಅದರಲ್ಲಿ ಇಂಡಿಯಾ ಪದವನ್ನು ಬಿಟ್ಟು ಭಾರತ್ ಪದವನ್ನು ಜೋಡಿಸಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಇದರ ಹಿಂದೆ ಚುನಾವಣಾ ಉದ್ದೇಶವಿದೆ. ಇದು ರಾಜಕೀಯ ಪ್ರೇರಿತ ಉದ್ದೇಶ ಎಂದೇ ಹೇಳಿದ್ದಾರೆ.
ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಆದರೆ ಬಿಜೆಪಿ ಹೆಸರು ಬದಲಾವಣೆ ಬಗ್ಗೆ ಮಾತನಾಡುತ್ತಿದೆ. ರಾಜ್ಯ ಶಿಕ್ಷಣ ನೀತಿ ಸಭೆ ಇದೆ. ಅದು ನಮ್ಮ ಅಡಿಯಲ್ಲಿಯೇ ಇರುತ್ತದೆ. ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಸ್ವಾರ್ಥ ಇದೆ. ಒಂದು ವೇಳೆ ಈ ಸಂಬಂಧ ನಮಗೆ ಶಿಫಾರಸು ಕಳುಹಿಸಿದರೆ, ಎಸ್ಇಪಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಎನ್ ಸಿ ಇ ಆರ್ ಟಿ ಶಾಲಾ ಪಠ್ಯಪುಸ್ತಕದಲ್ಲಿ ಇಂಡಿಯಾ ಬದಲು ಭಾರತ್ ಅನ್ನು ಬಳಸುವ ನಿರ್ಧಾರಕ್ಕೆ ಉನ್ನತ ಮಟ್ಟದ ಸಮಿತಿಯು ಇತ್ತಿಚೆಗೆ ಅನುಮೋದನೆ ನೀಡಿತ್ತು. ಭಾರತ್ ಎಂಬುದು ಹಳೆಯ ಹೆಸರು. ಭಾರತ್ ಎಂಬ ಹೆಸರು 7 ಸಾವಿರಗಳಷ್ಟು ಹಳೆಯ ಪುರಾತನ ಹೆಸರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತ್ತು. ಈ ವೇಳೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅದನ್ನು ಜಾರಿಗೆ ತಂದಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣ, ಎನ್‌ಇಪಿ ಬದಲಿಗೆ ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.