ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾನೂ ನೀಡಿದ್ದ ಗ್ಯಾರಂಟಿಗಳನ್ನೇನೋ ಚಾಲ್ತಿಗೆ ತಂದಿದೆ. ಜನ ಕೂಡ ಅರ್ಜಿಯನ್ನು ಹಾಕಿದ್ದಾರೆ. ಈಗಾಗಲೇ ಶಕ್ತಿ ಯೋಜನೆ ಹಾಗೂ ವಿದ್ಯುತ್ ಉಚಿತ ನೀಡಿ ಆಗಿದೆ. ಈಗ ಬಹು ನಿರೀಕ್ಷಿತ ಯೋಜನೆ ಗೃಹಲಕ್ಷ್ಮೀ. ರಾಜ್ಯದ ಹಿರಿಯ ಮಹಿಳೆಯರು ಇದಕ್ಕಾಗಿಯೇ ಕಾಯುತ್ತಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಜಿ ಪರಮೇಶ್ವರ್ ಅವರು, ಆಗಸ್ಟ್ 30 ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ಅವರು ಚಾಲನೆ ನೀಡಲಿದ್ದಾರೆ. ಆಗಸ್ಟ್ 30ರಂದೇ ಅಕೌಂಟ್ ಗೆ ಹಣ ಜಮೆ ಆಗುತ್ತದೆ. ಬಟನ್ ಒತ್ತುವ ಮೂಲಕ ಚಾಲನೆ ನೀಡಲಾಗುತ್ತದೆ. ಆ ಕ್ಷಣದಿಂದ ಮನೆಯ ಯಜಮಾನಿಗೆ ಹಣ ಜಮಾವಣೆಯಾಗುತ್ತದೆ. ಬಳಿಕ ಪ್ರತಿ ತಿಂಗಳು ಹಣ ಜಮಾವಣೆಯಾಗಲಿದೆ.
ಜನಗಳಿಗೆ ಏನು ಭರವಸೆ ಕೊಟ್ಟಿದ್ದೇವೊ ಆ ರೀತಿ ನಡೆದುಕೊಳ್ಳುತ್ತಾ ಇದ್ದೀವಿ. ಗ್ಯಾರಂಟಿಗಳನ್ನು ಈಗ ಅನುಷ್ಠಾನ ಮಾಡುತ್ತಿದ್ದೇವೆ. 11 ಗಂಟೆಗೆ ಮೈಸೂರಿನಲ್ಲಿ ಪ್ರಾರಂಭ ಮಾಡ್ತಾ ಇದ್ದೀವಿ. ಸ್ವಲ್ಪ ಸ್ಥಗಿತವಾಗಿರಬಹುದು. ಯಾಕಂದ್ರೆ ಬಜೆಟ್ ನಲ್ಲಿ ಸ್ವಲ್ಪ ಏರುಪೇರಾಗುತ್ತದೆ. ಬಸವರಾಜ್ ಬೊಮ್ಮಾಯಿ ಅವರು ಈ ಮೊದಲೇ ಬಜೆಟ್ ಘೋಷಣೆ ಮಾಡಿದ್ದರು. ಅದನ್ನೆಲ್ಲಾ ನೋಡಿಕೊಂಡು ಮಾಡಬೇಕಾಗುತ್ತದೆ ಎಂದಿದ್ದಾರೆ.
ಇನ್ನು ಇದೇ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಎಲೆಕ್ಷನ್ ಗೋಸ್ಕರ ಮಾಡಿದ ಗ್ಯಾರಂಟಿಗಳಲ್ಲ. ಜನರಿಗಾಗಿ ಮಾಡಿದ ಯೋಜನೆ ಇದು. ಅವರು ಏನೇ ಹೇಳಿದರು ನಮ್ಮ ಕೆಲಸವನ್ನು ನಾವೂ ಮಾಡುತ್ತಾ ಹೋಗುತ್ತೇವೆ. ವಿಪಕ್ಷಗಳು ಮೊಸರಿನಲ್ಲೂ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಎಂದಿದ್ದಾರೆ.