ಮಾಜಿ ಐಎಎಸ್ ಆಧಿಕಾರಿ ಕೆ ಶಿವರಾಮ್, ನಟ ಮಾತ್ರ ಅಲ್ಲ ರಾಜಕಾರಣಿ ಕೂಡ. ಇವರು ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಜೆಡಿಎಸ್ ನಲ್ಲೂ ಸೇವೆ ಸಲ್ಲಿಸಿದ್ದಾರೆ. ಆದರೆ ಕೊನೆಗೆ ಬಿಜೆಪಿ ಪಕ್ಷವನ್ನು ಸೇರಿದ್ದರು. ಅಷ್ಟಕ್ಕೂ ಜನಸೇವೆ ಮಾಡಲು ರಾಜಕೀಯಕ್ಕೆ ಬಂದ ಕೆ ಶಿವರಾಮ್ ಅವರು, ಬಿಜೆಪಿ ಪಕ್ಷ ಸೇರಿದ್ದಕ್ಕೂ ಒಂದು ಕಾರಣವಿದೆ.
ಕೆ ಶಿವರಾಮ್ ಅವರು 2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನಿವೃತ್ತಿ ಹೊಂದಿದ್ದರು. ಇದಾದ ಬಳಿಕ ರಾಜಕೀಯ ವೃತ್ತಿಯನ್ನು ಆರಂಭಿಸಿದರು. 2013ರಲ್ಲಿ ಕಾಂಗ್ರೆಸ್ ಸೇರಿದರು. 2014ಕ್ಕೆ ಜೆಡಿಎಸ್ ಪಕ್ಷ ಸೇರಿದರು. ಬಳಿಕ ಬಿಜಾಪುರ ಲೋಕಸಭಾ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ರಮೇಶ್ ಜಿಗಜಣಗಿ ವಿರುದ್ಧ ಸೋಲು ಕಂಡರು. ಅದಾದ ಬಳಿಕ ಅದೇ ವರ್ಷದಲ್ಲಿ ಕೆ ಶಿವರಾಮ್ ಅವರು ಮತ್ತೆ ಕಾಂಗ್ರೆಸ್ ಕಡೆಗೆ ಬಂದರು.
ದಲಿತ ನಾಯಕ ಉಪ ಮುಖ್ಯಮಂತ್ರಿಯಾಗಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ 2014ರಲ್ಲಿ ಜಿ ಪರಮೇಶ್ವರ್ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಆದರೆ ಕಾಂಗ್ರೆಸ್ ದಲಿತ ಉಪ ಮುಖ್ಯಮಂತ್ರಿ ಮಾಡುವಲ್ಲಿ ವಿಫಲವಾದ ಕಾರಣ ಪಕ್ಷ ಬಿಟ್ಟರು ಎನ್ನಲಾಗಿದೆ. ಅನಾರೋಗ್ಯದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ ಶಿವರಾಮ್ ಇಂದು ಎಲ್ಲರನ್ನು ಬಿಟ್ಟು ದೂರ ಹೋಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ಹಲವು ಕ್ಷೇತ್ರದಲ್ಲಿ ತಮ್ಮ ಸೇವೆ ನೀಡಿದ್ದಾರೆ. ಚಲನಚಿತ್ರ ನಟರಾಗಿ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಮಧುಚಂದ್ರಕೆ ಸಿನಿಮಾ ಎವರ್ ಗ್ರೀನ್ ಸಿನಿಮಾವಾಗಿ ಉಳಿದಿದೆ. ರಾಜಕೀಯದಲ್ಲೂ ಹಲವು ಮೈಲಿಗಲ್ಲು ಸಾಧಿಸಿದ್ದಾರೆ.