ಸುದ್ದಿಒನ್ : ಮಹಾರಾಷ್ಟ್ರ: ಶ್ರೀ ರಾಮ ನವಮಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯಕ್ಕೆ ದಾಖಲೆಯ ಆದಾಯ ಬಂದಿದೆ. ಈ ತಿಂಗಳ 5 ರಿಂದ 7 ರವರೆಗೆ ನಡೆದ ಶ್ರೀ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ಗೆ (SSST) ಒಟ್ಟು 4.26 ಕೋಟಿ ದೇಣಿಗೆ ಸಂಗ್ರಹವಾಗಿದೆ.

ಸಂಗ್ರಹವಾದ ಒಟ್ಟು ದೇಣಿಗೆಯಲ್ಲಿ ರೂ. 1.67 ಕೋಟಿ ರೂಪಾಯಿ ನಗದು ರೂಪದಲ್ಲಿ ಸಂಗ್ರಹವಾಗಿದೆ. ಇದರಲ್ಲಿ ದೇಣಿಗೆ ಕೌಂಟರ್‌ಗಳ ಮೂಲಕ 79.38 ಲಕ್ಷ ರೂ.ಗಳು, ದರ್ಶನ ಪಾಸ್‌ಗಳಿಂದ 47.16 ಲಕ್ಷ ರೂಪಾಯಿಗಳು ಬಂದಿವೆ. ಇವುಗಳ ಜೊತೆಗೆ, 6.15 ಲಕ್ಷ ರೂ. ಮೌಲ್ಯದ 83 ಗ್ರಾಂ ಚಿನ್ನ, 1.31 ಲಕ್ಷ, ರೂ. ಮೌಲ್ಯದ 2 ಕೆಜಿ ಬೆಳ್ಳಿ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ. ಈ ಶ್ರೀ ರಾಮ ನವಮಿಯ ಸಂದರ್ಭದಲ್ಲಿ, ಕೇವಲ ಮೂರು ದಿನಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿ ವರ್ಷ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಹಲವಾರು ಭಕ್ತರು ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಸಾಯಿಬಾಬಾ ಅವರನ್ನು ರಾಮನ ಪುನರ್ಜನ್ಮ ಎಂದು ನಂಬಲಾಗಿದೆ. ಆದ್ದರಿಂದ ರಾಮ ನವಮಿಯ ದಿನದಂದು ಭಕ್ತರು ಸಾಯಿಬಾಬಾ ದರ್ಶನ ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ.


