ಹಾಸನ: ವರ್ಷಕ್ಕರ ಒಂದೇ ಬಾರಿಗೆ ದರ್ಶನಕೊಡುವ ತಾಯಿ ಹಾಸನಾಂಬೆ. ಈ ವರ್ಷ ದೇವಾಲಯದ ಬಾಗಿಲು ತೆರೆದಿದ್ದು, ಒಂಭತ್ತು ದಿನಗಳ ಕಾಲ ತಾಯಿ ದರ್ಶನ ನೀಡುತ್ತಾಳೆ. ಇಂದು ಸಂಜೆಯ ತನಕ ತಾಯಿ ದರ್ಶನ ನೀಡಲಿದ್ದು, ಸಂಜೆ ವೇಳೆಗೆ ಬಾಗಿಲು ಹಾಕಲಾಗುತ್ತದೆ. ಈ ಹಿನ್ನೆಲೆ ಇಂದು ಭಕ್ತಾಧಿಗಳ ಸಂಖ್ಯೆ ಜಾಸ್ತಿಯೇ ಇದೆ.
ಕಳೆದ ಒಂಭತ್ತು ದಿನದಿಂದ ಕೂಡ ಹಾಸನಾಂಬೆ ದರ್ಶನ ಪಡೆಯಲು ಸಾವಿರಾರು ಜನ ಬಂದಿದ್ದರು. ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಹಾಸನಾಂಬೆಯ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬರೀ ಒಂಭತ್ತು ದಿನದಲ್ಲಿ ಸುಮಾರು 5.52 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಬಾರಿ ವಿಶೇಷ ಪಾಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದಕ್ಕೆ ಒಂದು ಪಾಸ್ ಸಾವಿರ ರೂಪಾಯಿ ಇತ್ತು. ಜೊತೆಗೆ 400 ರೂಪಾಯಿಗಳ ಪಾಸ್ ಕೂಡ ವಿತರಣೆ ಮಾಡಲಾಗಿದೆ. ಲಡ್ಡು ಪ್ರಸಾದ ವಿತರಣೆ ಎಲ್ಲಾ ಸೇರಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.
ಹಣ ಸಂಗ್ರಹದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದೇವಾಲಯವು ವರ್ಷದಲ್ಲಿ ಒಮ್ಮೆ ಮಾತ್ರ 10 ದಿನಗಳ ಕಾಲ ದೇವಾಲಯ ತೆರೆದಿರುತ್ತದೆ. ಹೀಗಾಗಿ, ಭಕ್ತರು ನೂಕುನುಗ್ಗಲಿನಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ 1,000 ರೂ. ಮೊತ್ತದ ವಿಶೇಷ ಟಿಕೆಟ್‌ಅನ್ನು 28,052 ಮಂದಿ ಖರೀಸಿದ್ದಾರೆ. 400 ರೂ. ಮೊತ್ತದ ಟಿಕೆಟ್‌ಅನ್ನು 71,885 ಮಂದಿ ಖರೀದಿಸಿದ್ದಾರೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ ಗೌಡ ತಿಳಿಸಿದ್ದಾರೆ.