ಬೀದರ್: ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಜಿಲ್ಲೆಯಲ್ಲಿ 545 ರೇಷ್ಮೆ ಬೆಳೆಗಾರರಿದ್ದು, ಸುಮಾರು 1116 ಎಕರೆಯಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಧಿಕಾರಿಗಳ ಈ ಮಾಹಿತಿಗೆ ಬೇಸರ ವ್ಯಕ್ತಪಡಿಸಿದ ಸಚಿವ ಡಾ.ನಾರಾಯಣಗೌಡ ಅವರು, ಈ ಭಾಗದಲ್ಲಿ ಉತ್ತಮ ನೀರಾವರಿ ಸೌಕರ್ಯ ಇದೆ. ಹಾಗಿದ್ದರೂ 1116 ಎಕರೆಯಲ್ಲಿ ಮಾತ್ರ ರೇಷ್ಮೆ ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಬೆಳೆಯುವುದರಿಂದ ಲಾಭ ಹೆಚ್ಚಿದೆ, ರೈತರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
ಈ ಭಾಗದ ರೈತರು ಶ್ರಮಜೀವಿಗಳು. ಕನಿಷ್ಠ 5 ಸಾವಿರ ಜನ ರೇಷ್ಮೆ ಬೆಳೆಯುವಂತಾಗಬೇಕು. ಆ ನಿಟ್ಟಿನಲ್ಲಿ
ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕರಪತ್ರಗಳು ಹಂಚುವುದು ಸೇರಿದಂತೆ ಉತ್ತಮ ಪ್ರಚಾರ ನೀಡುವಂತಹ ಕೆಲಸ ಮಾಡಿ. ಜಿಲ್ಲೆಯಲ್ಲಿ ಈಗ ಉತ್ತಮ ಇಳುವರಿ ತೆಗೆಯುತ್ತಿರುವ ರೈತರ ತೋಟಗಳು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕರೆದುಕೊಂಡು ಹೋಗಿ, ಅರಿವು ಮೂಡಿಸಿ ಎಂದು ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉತ್ತಮ ಇಳುವರಿ ತೆಗೆಯುತ್ತಿರುವ ರೇಷ್ಮೆ ಬೆಳೆಗಾರರನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸನ್ಮಾನಿಸುವ ಆಲೋಚನೆ ಇದೆ. ಇದಕ್ಕೆ ಅರ್ಹರನ್ನು ಗುರುತಿಸುವಂತೆ ಅಧಿಕಾರಿಳಿಗೆ ಸೂಚಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.
ಬೀದರ್ ಪಟ್ಟಣದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಸುತ್ತಲು ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಸಚಿವ ನಾರಾಯಣ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು. KRIDL ಗೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. KRIDL ನವರು ಸರಿಯಾಗಿ ಕೆಲಸ ಮಾಡಲ್ಲ. ನಿಮ್ಮನ್ನ ಬ್ಲಾಕ್ ಲೀಸ್ಟ್‌ಗೆ ಸೇರಿಸಲು ಪತ್ರ ಬರೆಯಲಾಗುತ್ತೆ, ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಬೇಜವಾಬ್ದಾರಿ ತೋರುತ್ತಿರುವ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಅವರು ವಾರ್ನಿಂಗ್ ನೀಡಿದರು.
ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೇ ಟೆಂಡರ್ ರದ್ದು ಮಾಡಿ, ಬೇರೆಯವರಿಗೆ ನೀಡುವುದಾಗಿ ಸಚಿವರು ಗಡುವು ನೀಡಿದರು.