ನೀರು ಹರಿಸುವತನಕ ಹಿಂದೆ ಸರಿಯುವುದಿಲ್ಲ : ಚಿತ್ರದುರ್ಗದಲ್ಲಿ ಎರಡನೆ ದಿನಕ್ಕೆ ರೈತರ ಧರಣಿ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06  : ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿರುವ ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ಕಾಯ್ದಿರಿಸಿ ಇದುವರೆವಿಗೂ ಬಿಡುಗಡೆಗೊಳಿಸದಿರುವುದನ್ನು ವಿರೋಧಿಸಿ ಮೂಲ ಸಿದ್ದಾಂತಗಳ ಯಜಮಾನಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ವಿವಿಧ ಜನಪರ ಸಂಘಟನೆಗಳೊಂದಿಗೆ ಜಿಲ್ಲಾ ಪಂಚಾಯಿತಿ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ಎರಡನೆ ದಿನವಾದ ಮಂಗಳವಾರ ಹುಣಸೆಕಟ್ಟೆ ಗ್ರಾಮದ ಅಹೋಬಲ ಭಜನಾ ತಂಡದವರು ಧರಣಿಯಲ್ಲಿ ಸಂಜೆಯವರೆಗೂ ಭಜನೆ ಮಾಡಿದರು. ಭಜನೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಜಿಲ್ಲೆಯಲ್ಲಿ ಈಗಾಗಲೆ ಬರಗಾಲ ತಲೆದೋರಿದ್ದು, ಇದಕ್ಕೆ ಶಾಶ್ವತ ಪರಿಹಾರವೆಂದರೆ ಭದ್ರಾಮೇಲ್ದಂಡೆ ಯೋಜನೆಯೊಂದೆ ಎನ್ನುವುದನ್ನು ಕಳೆದ ತಿಂಗಳು ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿರವರಿಗೆ ಮನವಿ ಪತ್ರ ನೀಡಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮೊದಲೆ ತಿಳಿಸಿದ್ದೆವು.

ಆದರೂ ನಮ್ಮ ಮನವಿಯನ್ನು ನಿರ್ಲಕ್ಷಿಸಿರುವ ಕೇಂದ್ರ ಸರ್ಕಾರ ಭದ್ರಾಮೇಲ್ದಂಡೆ ಯೋಜನೆಯನ್ನು ತುರ್ತಾಗಿ ಮುಗಿಸುವಂತೆ ಕಾಣುತ್ತಿಲ್ಲ. ಕಾಯ್ದಿರಿಸಿರುವ 5300 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆಗೊಳಿಸಿ ಎಲ್ಲೆಲ್ಲಿ ಸಮಸ್ಯೆಯಿದೆಯೋ ಅವುಗಳನ್ನೆಲ್ಲಾ ನಿವಾರಿಸಿ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂಬ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ರಾಮರೆಡ್ಡಿ, ಆರ್.ಬಿ.ನಿಜಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಹಳಿಯೂರು, ಇಬ್ಬರು ಮಂಗಳಮುಖಿಯರು ಧರಣಿಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲಿಸಿದರು.
ಹುಣಸೆಕಟ್ಟೆಯ ಮಾರುತಿ ಧರಣಿನಿರತ ರೈತರಿಗೆ ಪಪ್ಪಾಯಿ ಹಣ್ಣು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *