ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.30) : ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಯಾವುದೇ ಕಾರಣಕ್ಕೂ ಚಿಕ್ಕವಯಸ್ಸಿಗೆ ಕೆಲಸಕ್ಕೆ ಕಳಿಸಬೇಡಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ತಾಲ್ಲೂಕಿನ ನಗರಘಟ್ಟ ಗ್ರಾಮದಲ್ಲಿ ಭಾನುವಾರ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ದೂರದ ಗ್ರಾಮಗಳಿಂದ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶವಿಟ್ಟುಕೊಂಡು ನನ್ನ ಅನುದಾನದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಬಸ್‍ಗಳನ್ನು ನೀಡಿದ್ದೇನೆ. ಹೊಸ ಸರ್ಕಾರಿ ಶಾಲೆಗಳನ್ನು ಕಟ್ಟಿಸಿ ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆ, ಆಸ್ಪತ್ರೆ ಸೌಲಭ್ಯ ಒದಗಿಸಿದ್ದೇನೆ. ಹಾಗಾಗಿ ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದರೆ ವಂಶ ಬೆಳಗುತ್ತದೆ. ಚುನಾವಣೆಯಲ್ಲಿ ಮತ ಹಾಕಿ ನಂತರ ನೀವುಗಳು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತೀರ. ಏನನ್ನು ಕೇಳುವುದಿಲ್ಲ ಎನ್ನುವುದನ್ನು ಮನಗಂಡು ಕಾಂಕ್ರಿಟ್ ರಸ್ತೆ, ಬ್ರಿಡ್ಜ್ ಕಟ್ಟಿಸಿದ್ದೇನೆ. ಕರಿಯಮ್ಮ ದೇವಸ್ಥಾನಕ್ಕೆ ನಲವತ್ತು ಲಕ್ಷ ರೂ.ಗಳನ್ನು ನೀಡಿದ್ದೇನೆ. ಬಹಳ ಜನ ಈ ಕ್ಷೇತ್ರದಿಂದ ಗೆದ್ದು ಹೋಗಿದ್ದಾರೆ. ಯಾರ್ಯಾರು ಏನು ಮಾಡಿದ್ದಾರೆನ್ನುವುದು ಗೊತ್ತಿದೆ. ಯಾರನ್ನು ಟೀಕಿಸಲು ಹೋಗಲ್ಲ. ಯಾರು ಒಳ್ಳೆಯವರು, ಯಾರು ನಿಮ್ಮ ಪರವಾಗಿದ್ದಾರೆ, ಯಾವ ಸರ್ಕಾರ ಅಭಿವೃದ್ದಿ ಕೆಲಸಗಳನ್ನು ಮಾಡಿದೆ ಎನ್ನುವುದನ್ನು ತಿಳಿದುಕೊಂಡು ಮುಂದಿನ ಚುನಾವಣೆಯಲ್ಲಿ ಅರ್ಹರಿಗೆ ಮತ ನೀಡಿ ಎಂದು ವಿನಂತಿಸಿದರು.
ವಾಲ್ಮೀಕಿ ಜನಾಂಗದ ಪ್ರಸನ್ನಾನಂದ ಸ್ವಾಮೀಜಿ ಮೀಸಲಾತಿ ಹೆಚ್ಚಳಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 250 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ ಫಲವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್‍ಬೊಮ್ಮಾಯಿ ಮೀಸಲಾತಿಯನ್ನು ಶೇ.3 ರಿಂದ 7.5 ಕ್ಕೆ ಹೆಚ್ಚಿಸಿದ್ದಾರೆ. ಒಂದು ಕ್ಷಣ ಯೋಚಿಸಿ ಚುನಾವಣೆಯಲ್ಲಿ ಮತ ಚಲಾಯಿಸಿ ಎಂದು ಕ್ಷೇತ್ರದ ಜನತೆಯಲ್ಲಿ ಶಾಸಕ ಎಂ.ಚಂದ್ರಪ್ಪ ಕೋರಿದರು.
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಕಮಲಾ ಶ್ರೀನಿವಾಸ್, ಶ್ರೀಮತಿ ಸುಧಾ ಮಂಜುನಾಥ್, ಕರಿಯಪ್ಪ, ಶೇಖರಪ್ಪ, ಕರಿಸಿದ್ದಪ್ಪ, ಬಸಪ್ಪ, ನಾಗರಾಜ್, ಮೈಲಾರಪ್ಪ, ಬಸವರಾಜಪ್ಪ, ಸಿದ್ದಪ್ಪ, ರಾಮಪ್ಪ ಹಾಗೂ ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.