in ,

ಸ್ಥಾನಮಾನ ನೀಡುವಂತೆ ಪ್ರತಿಭಟನೆ ನಡೆಸಿ, ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸದಿರಿ : ಮಾಜಿ ಸಚಿವ ಹೆಚ್. ಆಂಜನೇಯ ಮನವಿ

suddione whatsapp group join

 

ಚಿತ್ರದುರ್ಗ,(ಮೇ 24)  : ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿನ ಬಳಿಕ, ನನಗೆ ಎಂಎಲ್ಸಿ ಮಾಡಿ, ಇತರೆ ಸ್ಥಾನಮಾನ ನೀಡುವಂತೆ ಹಲವೆಡೆ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ನಾನು ಚುನಾವಣೆಯಲ್ಲಿ ಸೋತ ಬಳಿಕ ಕಾರ್ಯಕರ್ತರು, ಬೆಂಬಲಿಗರು, ವಿವಿಧ ಸಂಘಟನೆಗಳ ಮುಖಂಡರು ನನಗೆ ಸ್ಥಾನಮಾನ ನೀಡುವಂತೆ ಆಗ್ರಹ, ಪ್ರತಿಭಟನೆ, ಹೇಳಿಕೆ, ಪತ್ರ ಚಳವಳಿ ಕೆಲ ದಿನಗಳಿಂದ ಎಲ್ಲೆಡೆ ನಡೆಸುತ್ತಿದ್ದು, ಈ ರೀತಿಯ ನಡೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ದಶಕಗಳ ಕಾಲ ಸಲ್ಲಿಸಿದ ನನ್ನ ಸೇವೆ, ಸಂಘಟನಾ ಶಕ್ತಿ ಗೊತ್ತಿದ್ದರಿಂದಲೇ ನನಗೆ ಅನೇಕ ಸ್ಥಾನಮಾನ ನೀಡಿದೆ. ಇತ್ತೀಚೆಗೆ ಅನೇಕರ ಪಿತೂರಿ, ಸುಳ್ಳು ಸುದ್ದಿಗಳಿಗೆ ಪಕ್ಷದ ವರಿಷ್ಠರು ಮನ್ನಣೆ ನೀಡದೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಸ್ಪರ್ಧಿಸಲು ನನಗೆ ಟಿಕೆಟ್ ನೀಡಿ  ಗೌರವಿಸಿದ್ದಾರೆ. ಆದರೆ ತಾಯಿಗೆ ದ್ರೋಹ ಮಾಡುವ ರೀತಿ ಪಕ್ಷದಲ್ಲಿದ್ದುಕೊಂಡೇ ಕೆಲವರು ಕುತಂತ್ರ ನಡೆಸಿದ್ದರಿಂದ  ಕಡಿಮೆ ಮತಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು.

ಆದರೂ ನಾನು ಧೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ನನ್ನನ್ನು ಎಂಎಲ್ಸಿ ಮಾಡಿ, ಮಂತ್ರಿ ಮಾಡಬೇಕೆಂಬ ಕೂಗು ಇತ್ತೀಚೆಗೆ ಎಲ್ಲೆಡೆಯೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆ, ಹೇಳಿಕೆಗಳ ಮೂಲಕ ನನಗೆ ಸ್ಥಾನಮಾನ ನೀಡುವಂತೆ ಧ್ವನಿಯೆತ್ತುತ್ತಿರುವ  ಕಾರ್ಯಕರ್ತರು, ಹಲವು ಸಂಘಟನೆಗಳ ಮುಖಂಡರು ಹಾಗೂ ಬೆಂಬಲಿಗರ ಅಭಿಮಾನಕ್ಕೆ ನಾನು ಸದಾ ಕೃತಜ್ಞನಾಗಿರುವೆ. ಜೊತೆಗೆ ಈ ರೀತಿ ಒತ್ತಡದ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸದಂತೆಯೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಪಕ್ಷ ಭಾರಿ ಬಹುಮತದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಐದು ವರ್ಷಗಳ ಕಾಲ ಸದೃಢ ಆಡಳಿತ ನೀಡಬೇಕೆಂಬ ಬದ್ಧತೆಯನ್ನು ನಮ್ಮ ನಾಯಕರು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಹಾಗೂ ನನ್ನ ಮೇಲಿನ ಅಭಿಮಾನದ ಕಾರಣಕ್ಕೆ ನನಗೆ ಸ್ಥಾನಮಾನ ನೀಡಬೇಕೆಂದು ಬೀದಿಗಿಳಿದು ಹೋರಾಟ ನಡೆಸುವುದು ಈ ಸಂದರ್ಭ ಸರಿಯಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.

ಕಾರ್ಯಕರ್ತರ ಅಭಿಮಾನವನ್ನು ಗೌರವಿಸುವ ಜೊತೆಗೆ ಪಕ್ಷದ ಹಿತವನ್ನು ಕಾಪಾಡುವುದು ಪಕ್ಷದ ಕಟ್ಟಾಳಾದ ನನ್ನ ಜವಾಬ್ದಾರಿ ಆಗಿದೆ ಎಂದಿದ್ದಾರೆ. ಸೋತರೂ ಕೆಲವರ ಸಂಘಟನಾ ಶಕ್ತಿ, ಸೇವೆಯನ್ನು ಪಕ್ಷ ಅನೇಕ ಬಾರಿ ಬಳಸಿಕೊಂಡ ನಿದರ್ಶನಗಳು ಕಣ್ಣಮುಂದೆ ಇದೆ. ಅದೇ ರೀತಿ ನನಗೆ ಯಾವ ಸಂದರ್ಭ, ಯಾವ ರೀತಿಯ ಅಧಿಕಾರ ಕೊಡಬೇಕೆಂಬುದು ಪಕ್ಷಕ್ಕೆ ಗೊತ್ತಿದೆ. ಆ ವಿಶ್ವಾಸ ನನ್ನಲ್ಲಿ ಇದೆ.

ಆದ್ದರಿಂದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಯಾವುದೇ ರೀತಿಯಲ್ಲೂ ಪ್ರತಿಭಟನೆ, ಹೇಳಿಕೆಗಳ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ನಡೆಸಬಾರದು. ಜನಪರ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರದ ಬೆನ್ನೆಲುಬು ಆಗಿ ನಿಲ್ಲಬೇಕು.

ಜೊತೆಗೆ ಪಕ್ಷ ದ್ರೋಹಿಗಳ ಕುರಿತು ಹೆಚ್ಚು ಜಾಗ್ರತೆ ವಹಿಸುವ ಮೂಲಕ ರಾಜ್ಯಾಧ್ಯಂತ ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಈಗಲೇ ಸಂಘಟನೆಯತ್ತ ಗಮನಹರಿಸಬೇಕು.

ಈ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಕೈಬಲಪಡಿಸಿ, ಜನನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಶ್ರಮಿಸಬೇಕು. ಆದ್ದರಿಂದ ಹೇಳಿಕೆ, ಪ್ರತಿಭಟನೆ ಮೂಲಕ ಗೊಂದಲ ಮೂಡಿಸದೆ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಕಟಣೆ ಮೂಲಕ ಕೋರಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

BJP ಸರ್ಕಾರದಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಈಗ ಎಫ್ಐಆರ್ ದಾಖಲು..!

ಬಳ್ಳಾರಿ ಜಿಲ್ಲೆಯನ್ನು ಕ್ಷಯರೋಗದಿಂದ ಮುಕ್ತಿಯಾಗಿಸೋಣ: ಡಾ ಇಂದ್ರಾಣಿ