ಬೆಂಗಳೂರು: ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಇಂದು ಪ್ರವೀಣ್ ಅಂತ್ಯಕ್ರಿಯೆ ನಡೆಯಲಿದೆ. ಈ ಹತ್ಯೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಯಾವುದೇ ಕಾರಣಕ್ಕೂ ದುಷ್ಟ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲ ಎಂದಿದ್ದಾರೆ.
ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತೇವೆ. ಪ್ರವೀಣ್ ಹತ್ಯೆ ಬಹಳ ದುರಾದೃರಷ್ಟಕರವಾದಂತದ್ದು. ಕತ್ತಲಿರುವಾಗ ದುಷ್ಕರ್ಮಿಗಳು ಹತ್ಯೆ ಮಾಡಿ ಹೋಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಇಂಥ ದುಷ್ಟ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲ. ಪ್ರವೀಣ್ ಹತ್ಯೆ ಬಗ್ಗೆ ಹಲವು ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಹತ್ಯೆಗೆ ಇಂಥದ್ದೆ ಕಾರಣ ಎಂದು ನಾನು ಹೇಳಲಾಗುವುದಿಲ್ಲ. ಸಾವು ವ್ಯರ್ಥವಾಗಲ್ಲ, ಆರೋಪಿಗಳನ್ನು ಬಂಧಿಸುತ್ತೇವೆ.
ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ. ಉಡುಪಿ, ಮಂಗಳೂರಿನಿಂದಲೂ ಪೊಲೀಸರನ್ನು ಕಳುಹಿಸಿದ್ದೇವೆ. ನಿನ್ನೆ ರಾತ್ರಿಯಿಂದಲೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೇರಳ ಪೊಲೀಸರೊಂದಿಗೂ ಸಂಪರ್ಕದಲ್ಲಿದ್ದೇವೆ. ಜನರು ಯಾವುದೇ ಕಾರಣಕ್ಕೂ ಉದ್ವಿಗ್ನಕ್ಕೆ ಒಳಗಾಗಬಾರದು. ಕರಾವಳಿಯಲ್ಲಿ ತುಂಬಾ ವರ್ಷಗಳಿಂದ ಇದು ನಡೆಯುತ್ತಿದೆ. ಅವರನ್ನು ಮಟ್ಟಹಾಕಲು ಕೇರಳ ಕೂಡ ಸಹಕರಿಸಬೇಕು ಎಂದಿದ್ದಾರೆ.