ಚಿತ್ರದುರ್ಗ,(ಸೆಪ್ಟೆಂಬರ್16) : ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯನ್ನು ಕೃಷಿ, ತೋಟಗಾರಿಕೆ, ಕಂದಾಯ ವಿವಿಧ ಇಲಾಖೆಗಳು ಸಮಾರೋಪಾದಿಯಲ್ಲಿ ಜಂಟಿ ಸರ್ವೇ ಕಾರ್ಯನಡೆಸಿ, ಪರಿಹಾರ ತಂತ್ರಾಂಶದಲ್ಲಿ ನಮೂದಿಸಿ, ಸಂಬಂಧಪಟ್ಟವರಿಗೆ ತ್ವರಿತವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಳೆಯಿಂದಾದ ಹಾನಿಗೆ ಸಂಬಂಧಿಸಿದಂತೆ ಪರಿಹಾರ ತಂತ್ರಾಂಶದಲ್ಲಿ ಇಲ್ಲಿಯವರೆಗೆ 30,000 ಪ್ರಕರಣಗಳನ್ನು ನಮೂದು ಮಾಡಲಾಗಿದ್ದು, 4361 ಮಂದಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ತಂತ್ರಾಂಶದಲ್ಲಿ ತಕ್ಷಣ ನಮೂದು ಮಾಡುವಂತೆ ಸಚಿವರು ತಿಳಿಸಿದರು.
ಜೂನ್ ಮಾಹೆಯಿಂದ ಈವರೆಗೆ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ 1 ಜೀವಹಾನಿಯಾಗಿದ್ದು, ರೂ.5 ಲಕ್ಷ ಪರಿಹಾರ ಮೊತ್ತ ವಿತರಿಸಲಾಗಿದೆ. ದೊಡ್ಡ ಜಾನುವಾರು 1 ಹಾಗೂ ಚಿಕ್ಕಜಾನುವಾರು 5 ಸೇರಿದಂತೆ 6 ಜಾನುವಾರುಗಳು ಸಾವನ್ನಪ್ಪಿದ್ದು, ಈಗಾಗಲೇ ಪರಿಹಾರ ನೀಡಲಾಗಿದೆ. 13 ಮನೆಗಳು ಪೂರ್ಣಹಾನಿ, 66 ಮನೆಗಳು ತೀವ್ರತರ ಹಾನಿ ಹಾಗೂ 1197 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ವಾಸದ ಮನೆಗಳ ಹಾನಿಗೆ ಸಂಬಂಧಿಸಿದಂತೆ ರೂ.2 ಕೋಟಿ 43 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.
ಬೆಳೆವಿಮೆ ಕಂಪನಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಿ ಕಾರ್ಯನಿರ್ವಹಿಸಬೇಕು. ಕಂಪನಿಯ ಓರ್ವ ಪ್ರತಿನಿಧಿ ಕಡ್ಡಾಯವಾಗಿ ಅಲ್ಲಿ ಹಾಜರಿರಬೇಕು. ಪ್ರಕೃತಿ ವಿಕೋಪದಡಿಯಲ್ಲಿ ಈಗಾಗಲೇ 16 ಸಾವಿರಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ. ವಿಮಾ ಕಂಪನಿಯವರು ರೈತರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರು ಈ ಬಾರಿ ಸಂಕಷ್ಟದಲ್ಲಿದ್ದಾರೆ. ಬೆಳೆಹಾನಿಯಾದರೂ ಪರಿಹಾರ ಸಿಗಲಿಲ್ಲ ಎಂಬ ಆಪಾದನೆ ಬರುವುದು ಬೇಡ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಂಖ್ಯಾ ಸಂಗ್ರಹಣಾ ಇಲಾಖೆಯವರು ಫಾರಂ-1 ಕೊಡುವಾಗ ಎಲ್ಲೆಲ್ಲಿ ಬೆಳೆನಷ್ಟವಾಗಿದೆ ಎಂಬುದನ್ನು ಪತ್ತೆಹಚ್ಚಿ ಸಮರ್ಪಕವಾಗಿ ಮಾಹಿತಿ ನೀಡಬೇಕು ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ಮಳೆಯಿಂದಾಗಿ ಈ ಬಾರಿ 16,153 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ ಆಗಿದೆ. ಹೆಚ್ಚಾಗಿ 14,242 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಗೊಳಾಗಿದೆ. 805 ಹೆಕ್ಟೇರ್ ಟೊಮೊಟೊ ಬೆಳೆಹಾನಿಯಾಗಿದೆ. ಅಲ್ಲದೇ ದಾಳಿಂಬೆ, ಅಡಿಕೆ, ಹೂ, ಪಪ್ಪಾಯಿ ಬೆಳೆಹಾನಿಯಾಗಿದೆ. ವಿವಿ ಸಾಗರ ಹಿನ್ನೀರಿನಲ್ಲಿ ಸುಮಾರು 9 ಅಡಿ ಎತ್ತರದಷ್ಟು ನೀರು ನಿಂತಿರುವುದರಿಂದ ತೆಂಗು ಹಾಗೂ ಅಡಿಕೆ ಬೆಳೆ ನಷ್ಟವಾಗಿದೆ. ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಮೂರು-ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಮೀಕ್ಷಾ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು ಎಂದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಾತನಾಡಿ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸುಮಾರು 146 ಕಿ.ಮೀ ರಸ್ತೆ, 30 ಸೇತುವೆ ಹಾಳಾಗಿದ್ದು, ರೂ.8.21 ಕೋಟಿ ನಷ್ಟದ ಅಂದಾಜು ಮಾಡಲಾಗಿದೆ ಎಂದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವ್ಯಾಪ್ತಿಯ 254 ಕಿ.ಮೀ ಗ್ರಾಮೀಣ ರಸ್ತೆ ಹಾನಿಯಾಗಿದೆ ಅಲ್ಲದೆ ಚರಂಡಿ ಹಾಗೂ ಅಲ್ಲಲ್ಲಿ ಕೆರೆಗಳು ಹಾನಿಗೊಳಾಗಿದ್ದು, ರೂ.34.6 ಹಾನಿಯ ಅಂದಾಜು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹೆಚ್ಚು ಮಳೆಯಿಂದಾಗಿ ಜಿಲ್ಲೆಯ 360 ಶಾಲೆಗಳ 740 ಶಾಲಾ ಕೊಠಡಿಗಳು ಹಾನಿಗೊಳಲಾಗಿದ್ದು, ಶಾಲಾ ಕೊಠಡಿಗಳ ದುರಸ್ತಿಗೆ ರೂ.10.63 ಕೋಟಿ ಅನುದಾನ ಅಗತ್ಯವಿದೆ ಎಂದು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಮಾಹಿತಿ ನೀಡಿದರು. ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ, ವರದಿ ನೀಡಬೇಕು ಎಂದರು.
ಟೆಂಡರ್‍ದಾರರು ಸಾಯಂಕಾಲ ಅಳಿದುಳಿದ ಗುಣಮಟ್ಟವಿಲ್ಲದ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರಲ್ಲಿ ಖರೀದಿಸಿ, ವಿದ್ಯಾರ್ಥಿ ನಿಲಯಗಳಿಗೆ ಪೂರೈಸುತ್ತಾರೆ. ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ವಿದ್ಯಾರ್ಥಿ ನಿಲಯದಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿದ್ದೀರಾ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಮತಾ ಅವರನ್ನು ಪ್ರಶ್ನಿಸಿದ ಸಚಿವರು, ಜಿಲ್ಲಾಧಿಕಾರಿಗಳು, ಸಿಇಒ ಖುದ್ದು ಹಾಸ್ಟೆಲ್‍ಗಳಿಗೆ ಭೇಟಿ ನೀಡಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ