ಬೆಂಗಳೂರು: ಸಂಸದ ಡಿಕೆ ಸುರೇಶ್ ರಾಜ್ಯ ರಾಜಕಾರಣಕ್ಕೆ ಬರುವುದಕ್ಕೆ ಹೈಕಮಾಂಡ್ ಅಸ್ತು ಎಂದಿದೆ. ನಾಮಪತ್ರ ಸಲ್ಲಿಕೆಗೆ ಈಗಾಗಲೇ ಎಲ್ಲಾ ವ್ಯವಸ್ಥೆ ಆಗಿದೆ ಎಂದು ಸ್ವತಃ ಡಿಕೆ ಸುರೇಶ್ ಅವರೇ ತಿಳಿಸಿದ್ದಾರೆ. ಪಕ್ಷದ ನಾಯಕರು, ಎಲ್ಲಿಂದ ನಿಲ್ಲಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಆನೇಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಈಗಾಗಲೇ ನಾಮಪತ್ರ ಹಾಕಲು ಸಿದ್ಧತೆ ಮಾಡಿಕೊಳ್ಳಿ ಎಂದಿದ್ದಾರೆ. ನಾನು ಕೂಡ ಏನೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪಕ್ಷದ ನಾಯಕರನ್ನು ಕೇಳಬೇಕಾಗುತ್ತದೆ. ಪಕ್ಷದ ಸೂಚನೆಗೆ ಬದ್ಧನಾಗಿರುತ್ತೇನೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನನ್ನ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ. ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರಕ್ಕೆ ರೆಡಿ ಮಾಡಿಕೋ ಎಂದಿದ್ದಾರೆ. ಆದರೆ ಎಲ್ಲಿ, ಯಾವ ಕ್ಷೇತ್ರ ಎಂಬುದನ್ನು ತಿಳಿಸಿಲ್ಲ ಎಂದಿದ್ದಾರೆ.
ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಜಿದ್ದಾ ಜಿದ್ದಿನ ಕಣ ಏರ್ಪಟ್ಟಿದೆ. ಯಾಕಂದ್ರೆ ಕಾಂಗ್ರೆಸ್ ನ ಸ್ಟ್ರಾಂಗ್ ಕ್ಯಾಂಡಿಡೇಟ್ ಗಳು ಇರುವ ಕಡೆಯಲ್ಲಿ ಬಿಜೆಪಿ ತನ್ನ ಪ್ರಬಲ ಅಭ್ಯರ್ಥಿಗಳನ್ನು ಹಾಕಿದೆ. ಡಿಕೆಶಿ ವಿರುದ್ಧ ಆರ್ ಅಶೋಕ್, ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಈಗ ಪದ್ಮನಾಭನಗರದಲ್ಲಿ ಅಶೋಕ್ ಎದುರು ಡಿಕೆ ಸುರೇಶ್ ಅವರನ್ನು ಇಳಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ.