ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸುದೀಪ್ ಅವರನ್ನು ಕರೆತರಬೇಕೆಂದು ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ರಮ್ಯಾ ಅವರು ಇತ್ತಿಚೆಗೆ ಸುದೀಪ್ ಅವರ ಬಳಿ ಮಾತನಾಡಿದ್ದರು. ಆದರೆ ಅದಾದ ಮೇಲೆ ಸುದೀಪ್ ಅವರ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ಸುದೀಪ್ ಅವರನ್ನು ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ, ಜೆಡಿಎಸ್ ಕೂಡ ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಆದರೆ ಸುದೀಪ್ ಯಾವ ಪಕ್ಷಕ್ಕೂ ಹೋಗದೆ ಅದೇ ಆತ್ಮೀಯತೆಯನ್ನು ಕಾಪಾಡಿಕೊಂಡಿದ್ದಾರೆ. ನಾನು ನಟನಷ್ಟೇ ರಾಜಕಾರಣ ಮಾಡುವುದಕ್ಕೆ ಬರಲ್ಲ ಎಂದು ಸುದೀಪ್ ಈ ಹಿಂದೆ ಹೇಳಿದ್ದರು. ಇದೀಗ ಬ್ಯಾಕ್ ಟು ಬ್ಯಾಕ್ ಎಲ್ಲರೂ ಪಕ್ಷಕ್ಕೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ.
ಇದೀಗ ಡಿಕೆ ಶಿವಕುಮಾರ್ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಸುದೀಪ್ ಜೊತೆಗೆ ನಲಪಾಡ್ ಕೂಡ ಹೋಗಿದ್ದಾರೆ. ನಿನ್ನೆ ರಾತ್ರಿ ಒಟ್ಟಿಗೆ ಊಟ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸಭೆಗಳಿಗೆ ಬಂದು, ವಾಲ್ಮೀಕಿ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅದರ ಜೊತೆಗೆ ಡಿಕೆ ಶಿವಕುಮಾರ್ ಒಡೆತನದ ಮಾಲ್ ವೊಂದರ ಮಲ್ಟಿಫ್ಲೆಕ್ಸ್ ಉದ್ಘಾಟನೆಗೆಂದು ಸುದೀಪ್ ರನ್ನು ಆಹ್ವಾನ ಮಾಡಲು ಹೋಗಿದ್ದರು ಎನ್ನಲಾಗಿದೆ. ಇದರ ಜೊತೆಗೆ ರಾಜಕೀಯ ಮಾತುಕತೆಯೂ ಆಗಿದೆ ಎನ್ನಲಾಗಿದೆ.