ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಬಿಜೆಪಿ ನಾಯಕರ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಚಿವ ಆರ್ ಅಶೋಕ್ ಮಾತನಾಡಿದ್ದು, ಡಿಕೆ ಶಿವಕುಮಾರ್ ಕ್ಷಮೆ ಕೇಳಲೇಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಅಶೊಕ್, ಪದೇ ಪದೇ ಕಾಂಗ್ರೆಸ್ ನ ನಾಯಕರು ಈ ರೀತಿಯಾದಂತ ಹೇಳಿಕೆ ನೀಡುತ್ತಲೆ ಇರುತ್ತಾರೆ. ಇತ್ತಿಚೆಗೆ ಜಾರಕಿಹೊಳಿ ಅವರು ಹಿಂದೂ ಅಂದ್ರೆ ಅವಹೇಳನ, ಅಶ್ಲೀಲ ಪದ ಅಂತ ಹೇಳಿ ಹಿಂದೂಗಳ ಮೇಲೆ ದಾಳಿ ಮಾಡಿದ್ರು. ಈಗ ಡಿಕೆಶಿ ಅದೇ ಹಾದಿ ಹಿಡಿದುಕೊಂಡು ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್ ಬಗ್ಗೆ ಎಲ್ಲರಿಗೂ ಗೊತ್ತು. ಅವನಿಗೆ ಎಲ್ಲೆಲ್ಲಿ ಲಿಂಕ್ ಇದೆ, ಅವನು ಯಾರು, ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ಮೀಡಿಯಾದಲ್ಲಿಯೇ ನೋಡಿದ್ದಾರೆ. ಮೀಡಿಯಾದಲ್ಲಿ ಬಂದ ನಂತರವೂ ಡಿಕೆ ಶಿವಕುಮಾರ್ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಅವರು ಈಗ ಕ್ಷಮೆ ಕೇಳಲೇಬೇಕಾಗಿದೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಅವರು ಇವತ್ತು ಬೆಳಗ್ಗೆ ಕೂಡ ತಾವೂ ನೀಡಿದ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು ಉಗ್ರರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ನಾನು ಹೇಳಿದ ವಿಚಾರದಲ್ಲಿ ಸತ್ಯಾಂಶವಿದೆ ಎಂದು ಹೇಳಿದ್ದಾರೆ.

