ಬೆಂಗಳೂರು: ಕೆಪಿಸಿಸಿ ಅಧ್ಯಕ್ಷಗಿರಿ ಪಡೆದರಷ್ಟೇ ಮುಖ್ಯಮಂತ್ರಿ ಸ್ಥಾನ ಎಂಬ ಕನಸು ಹೊತ್ತು ಚಿಕ್ಕಮಕ್ಕಳ ತರ ಡಿಕೆಶಿಯವರು ಅಧ್ಯಕ್ಷರಾದರು. ಅವರದೇ ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿಯವರ ತೇಜೋವಧೆ ಆಗಿದೆ ಹಾಗೂ ಮುಖವಾಡ ಕಳಚಿ ಬಿದ್ದಿದೆ ಎಂದು ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಕೆಶಿಯವರು ನಿಜವಾಗಿಯೂ ಪಕ್ಷದ ಅಧ್ಯಕ್ಷತೆ ಹೊಂದಿದ್ದರೆ, ಪರಿಶುದ್ಧರಾಗಿದ್ದರೆ, ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅನಿಸಿದ್ದರೆ ಉಗ್ರಪ್ಪ- ಸಲೀಂ ಅವರನ್ನು ಪಕ್ಷದಿಂದ ಹೊರಕ್ಕೆ ಹಾಕಲಿ ಎಂದು ಒತ್ತಾಯಿಸಿದರು.
ಡಿಕೆಶಿ ಭ್ರಷ್ಟರಲ್ಲ, ಕುಡುಕರಲ್ಲ, ಅವರು ಪರಿಶುದ್ಧರು ಎನ್ನಲು ಹತ್ತಾರು ವಕ್ತಾರರನ್ನು ನೇಮಿಸಬೇಕಾದ ಸ್ಥಿತಿ ಈಗ ಕಾಂಗ್ರೆಸ್‍ಗೆ ಬಂದಿದೆ ಎಂದರು.
ತಮ್ಮ ಮೇಲೆ ಐಟಿ, ಇಡಿ ಮತ್ತಿತರ ಕೇಂದ್ರದ ತನಿಖಾ ಸಂಸ್ಥೆಗಳಿಂದ ದಾಳಿ ನಡೆದಾಗ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಮತ್ತಿತರ ನಾಯಕರ ವಿರುದ್ಧ ಬೇಜವಾಬ್ದಾರಿ ವಾಗ್ದಾಳಿ ಮಾಡಿದ್ದ ಡಿಕೆಶಿ ಈಗ ಏನು ಉತ್ತರ ನೀಡುತ್ತೀರಿ ಎಂದು ಕೇಳಿದರು.
ಡಿಕೆಶಿ ನೇತೃತ್ವದ ಕೆಟ್ಟ ಪರಂಪರೆಯ ಕೆಟ್ಟ ಪಕ್ಷವನ್ನು ರಾಜ್ಯದ ಜನತೆ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿಯವರು ತನಿಖಾ ಸಂಸ್ಥೆಗಳು ಮತ್ತು ನಮ್ಮ ಪಕ್ಷದ ನಾಯಕರ ಮೇಲೆ ಮಾಡಿದ ಬೇಜವಾಬ್ದಾರಿ ಟೀಕೆ ಮತ್ತು ಆರೋಪಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಬಣ ರಾಜಕೀಯವನ್ನು ಜನತೆ ಒಪ್ಪದೆ ಬಿಜೆಪಿಯನ್ನು ಮುಂದೆಯೂ ಬೆಂಬಲಿಸಲಿದ್ದಾರೆ ಎಂದರು.
ಪಕ್ಷದ ವಿರುದ್ಧ ಮಾತನಾಡುವ ಎಚ್.ವಿಶ್ವನಾಥ್ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಅವರ ಬಾಯಿ ಬಂದ್ ಆಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್‍ನ ಒಂದು ಚಕ್ರ ಮಂಡ್ಯದ ಕಡೆ ಹಾಗೂ ಮತ್ತೊಂದು ಚಕ್ರ ಬೆಳಗಾವಿ ಕಡೆ ಹೋಗುತ್ತಿರುವ ಕಾರಣ ಆ ಪಕ್ಷ ಒಂದೇ ರಸ್ತೆಯಲ್ಲಿ ಸಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಬಿಜೆಪಿಗೆ ಪರ್ಯಾಯ ಸರಕಾರ ಕೊಡುವ ಕನಸನ್ನು ಕಾಣಲೂ ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕರ್ತರೂ ಮುಂದಿನ ದಿನಗಳಲ್ಲಿ ಯಾವ ರಥ ಹತ್ತಬೇಕು, ಯಾವ ಬಂಡಿ ಹತ್ತಿ ಎಲ್ಲೆಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.