ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗು ಜೋರಾಗಿಯೇ ಇದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಕೆ.ಎನ್ ರಾಜಣ್ಣ ನಡುವೆ ಈ ಸಂಬಂಧ ಜಟಾಪಟಿ ಜೋರಾಗಿಯೇ ಇದೆ. ಸಿಎಂ ಹೆಸರನ್ನ ಕೆಲವರು ದುರುಪಯೋಗ ಪಡಿಸಿಕೊಳ್ತಾ ಇದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ರೆ, ಹೈಕಮಾಂಡ್ ಹೆಸರನ್ನ ದುರುಪಯೋಗಪಡಿಸಿಕೊಂಡು ಸದಾಶಿವನಗರದಲ್ಲಿ ಮನೆ ಕಟ್ಟಿಲ್ವಾ ಅಂತ ರಾಜಣ್ಣ ದೂರುತ್ತಿದ್ದಾರೆ.
ಇಬ್ಬರ ಜಟಾಪಟಿಗೆ ಇದೀಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನೇನು ವಿವಾದಾತ್ಮಕ ಹೇಳಿಕೆ ನೀಡಲ್ಲ. ಅವರವರ ಅಭಿಪ್ರಾಯಗಳನ್ನ ಅವರು ನೀಡಿದ್ದಾರೆ. ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ, ಡಿಕೆಶಿ ಅವರ ಅಭಿಪ್ರಾಯ ತಿಳಿಸಿದ್ದಾರೆ. ಅಂತಿಮವಾಗಿ ಎಲ್ಲವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಇನ್ನ ಡಿಕೆಶಿ ಹಾಗೂ ರಾಜಣ್ಣ ಜಡಾಪಟಿಗೆ ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿ, ಯಾರೂ ಯಾರ ಪರವೂ ಇಲ್ಲ. ಹೈಕಮಾಂಡ್ ಏನು ಹೇಳುತ್ತೆ ಎಲ್ಲರೂ ಅದನ್ನ ಪಾಲನೆ ಮಾಡ್ತಾರೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಂದುವರಿತಾರಾ ಇಲ್ವಾ ಎನ್ನುವ ವಿಚಾರಕ್ಕೆ ಬಾಗಲಕೋಟೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಸಿಎಂ ಇದ್ದಾಗ ಅವರು ಬದಲಾವಣೆ ಆಗುತ್ತೆ ಅಂತ ಯಾಕೆ ಚರ್ಚೆ ಮಾಡಬೇಕು? ಎಂದಿದ್ದಾರೆ. ಸಿದ್ದರಾಮಯ್ಯ ಏನು ಸಣ್ಣ ವ್ಯಕ್ತಿನಾ? ಹಿಂದೆ ಅವರು ಐದು ವರ್ಷ ಅಧಿಕಾರ ನಡೆಸಿರೋರು. ಈಗ ಅವರು ಮುಖ್ಯಮಂತ್ರಿ ಇದ್ದಾರೆ. ಈಗ ಇನ್ನೊಬ್ಬ ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡೋದು ಅವಶ್ಯಕತೆಯೇ ಇಲ್ಲ. ಗುಸು ಗುಸು ಸುದ್ದಿಯಿಂದ ಇದೆಲ್ಲ ಆಗ್ತಿದೆ. ಆದರೆ, ಅವಶ್ಯಕತೆ ಏನಿದೆ.? ಒಬ್ವರು ಸಿಎಂ ಇದ್ದಾರೆ ಅಂದ ಮೇಲೆ ಇನ್ಬೊಬ್ಬರು ಸಿಎಂ ಆಗ್ತಾರೆ ಅಂತ ಚರ್ಚೆ ಆಗಬಾರದು. ಇವರು ಮುಂದುವರೆತಾರೆ ಅಥವಾ ಬದಲಾಗುತ್ತಾರೆ ಎಂದು ಹೇಳೋದು ಬೇಕಿಲ್ಲ ಎಂದಿದ್ದಾರೆ.







