ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದ ಚರ್ಚೆಯೇ ಜೋರಾಗಿದೆ. ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸುತ್ತಾರೆ, ಡಿಸಿಎಂ ಡಿಕೆ ಶಿವಕುಮಾರ್ ಗೆ ಈ ಅವಧಿಯಲ್ಲಿಯೇ ಸಿಎಂ ಪಟ್ಟ ಸಿಗುತ್ತದೆ ಎಂಬೆಲ್ಲಾ ಚರ್ಚೆಗಳು ನಡೆಯುತ್ತಿದ್ದವು. ಈಚೆಗಷ್ಟೇ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಕೂಡ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿದ್ದರು. ಇಷ್ಟೆಲ್ಲಾ ಚರ್ಚೆ ಬೆಳವಣಿಗೆಯ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಪಕ್ಷ ಸಂಘಟನೆ, ಶಿಸ್ತು ಪಾಲನೆ, ನೂತನ ಕಚೇರಿಗಳ ನಿರ್ಮಾಣ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಯಾಕಂದ್ರೆ ಪಕ್ಷದ ಕೆಲ ಶಾಸಕರೇ ಪಕ್ಷಕ್ಕೆ ಮುಜುಗರ ಆಗುವಂತ ಮಾತುಗಳನ್ನಾಡಿದ್ದಾರೆ. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಪ್ರತ್ಯೇಕ ಸಭೆ ನಡೆಸಲು ಸಮಯ, ಸ್ಥಳ ನಿಗದಿ ಮಾಡಿದ್ದರು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆಗಳನ್ನ ನೀಡಿದ್ದರು, ಯಾವುದೇ ಪ್ರಯೋಜನವಾಗಿಲ್ಲ. ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದಾರೆ. ಹೀಗಾಗಿ ರಾಜಣ್ಣ ಅವರಿಗೆ ಸಿದ್ದರಾಮಯ್ಯ ಅವರು ತಿಳಿಸಿ ಹೇಳುತ್ತಾರೆ ಎಂಬ ನಂಬಿಕೆಯೂ ಹುಸಿಯಾಗಿದೆ. ಹೀಗಾಗಿ ಸಚಿವರ ನಡವಳಿಕೆಗೆ ಕಡಿವಾಣ ಹಾಕುವಂತೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದರ ಬಗ್ಗೆಯೂ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

