ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗೆಂದು ದೆಹಲಿಗೆ ತೆರಳಿದ್ದರು. ಆದರೆ ನಿರಾಸೆಯಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಅಂದ್ರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡದೆ ದೆಹಲಿಯಿಂದ ವಾಪಾಸ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗ್ತೇನೆ ಎಂಬ ಮಾತನ್ನ ಹೇಳಿದ್ದಾರೆ. ಆದರೆ ಅದಕ್ಕೂ ಮುನ್ನವೇ ಡಿಕೆ ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು, ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದರು. ಈ ಹಿನ್ನೆಲೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇಂದು ಭೇಟಿಗೆ ಅವಕಾಶ ನೀಡಿದ್ದರಂತೆ. ಅಂದ್ರೆ ಬೆಳಗ್ಗೆ 10 ಯಿಂದ 11 ಗಂಟೆಯ ಒಳಗೆ ಭೇಟಿಯಾಗುತ್ತಾರೆ ಎಂಬ ಮಾತನ್ನ ಹೇಳಿದ್ದರಂತೆ. ಹೀಗಾಗಿಯೇ ಡಿಕೆ ಶಿವಕುಮಾರ್ ಅವರು ಭಾನುವಾರ ಸಂಜೆಯೇ ದೆಹಲಿಗೆ ಹೋಗಿದ್ದರು. ಆದರೆ ಇಂದು ಬೆಳಗ್ಗೆ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಗಲಿಲ್ಲ. ಹೀಗಾಗಿಯೇ ಡಿಸಿಎಂ ಡಿಕೆ ಶಿವಕುಮಾರ್ ಅವರು ನಿರಾಸೆಯಿಂದ ವಾಪಾಸ್ ಬಂದಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ವಿಮಾನ ಹತ್ತಿ ವಾಪಾಸ್ ಬೆಂಗಳೂರಿಗೆ ಬಂದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು, ದೆಹಲಿಗೆ ತೆರಳುವುದಕ್ಕೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಈ ವೇಳೆ ನಾನು ನಿಯಮಿತವಾಗಿ ದೆಹಲಿಗೆ ಕೆಲಸ ಇದ್ದಾಗ ಹೋಗುತ್ತಿರುತ್ತೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಕ್ಕೆ ಹೋಗುತ್ತಿರುತ್ತೇನೆ. ಹಾಗೇ ವಿಶ್ರಾಂತಿ ಪಡೆಯಲು, ಶಾಪಿಂಗ್ ಮಾಡುವುದಕ್ಕೆ ಜೊತೆಗೆ ನ್ಯಾಯಾಲಯದ ಪ್ರಕರಣಗಳಿಗೂ ಹೋಗುತ್ತೇನೆ ಎಂದು ಕ್ಲಾರಿಟಿ ಕೊಟ್ಟಿದ್ದರು. ಆದರೆ ಈ ಬಾರಿ ಹೈಕಮಾಂಡ್ ನಾಯಕರ ಭೇಟಿಗೆ ಯಾಕೆ ಹೋಗ್ತಾ ಇದ್ದೇನೆ ಎಂದು ಹೇಳಿರಲಿಲ್ಲ.







