ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇಂದು ವಿಧಾನ ಸೌಧದ ಮುಂದೆ ಧರಣಿ ಕುಳಿತಿರುವ ಕಾಂಗ್ರೆಸ್ ನಾಯಕರು ಈಶ್ವರಪ್ಪ ಶಿಕ್ಷೆಗೆ ಒತ್ತಾಯಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಯಡಿಯೂರಪ್ಪ ಅವರು ಯಾಕೆ ಸುಮ್ಮನೆ ಇದ್ದಾರೆ ಗೊತ್ತಿಲ್ಲ. ಮುಖ್ಯಮಂತ್ರಿಗಳೇನೋ ಅವರ ರಕ್ಷಣೆ ಮಾಡ್ತಾವ್ರೆ. ಪಿಎಂ ಮೋದಿ ನಾನು ತಿನ್ನೋದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಅಂತ ಹೇಳಿದ್ದರು. ಆ ತಾಯಿ ಗೋಳು ಕೇಳಪ್ಪ ದೇಶದ ಪ್ರಧಾನಮಂತ್ರಿಗಳೇ. ಮುಖ್ಯಮಂತ್ರಿಗಳೇ ಸಂತೋಷ್ ಹೆಂಡತಿಯ ನೋವನ್ನು ಕೇಳಬೇಕು ನೀವೂ, ಅವರ ತಮ್ಮನನ್ನು ಭೇಟಿ ಮಾಡಬೇಕು ನೀವು. ಒಂದು ಕೋಟಿ ರೂಪಾಯಿ ಪರಿಹಾರ ಕೊಡಬೇಕು.
ನಾವೂ ಕಾಂಗ್ರೆಸ್ ಪರವಾಗಿ 11 ಲಕ್ಷ ಕೊಡುತ್ತೀನಿ ಅಂತ ಹೇಳಿದ್ದೆ. ಸರ್ಕಾರಿ ನೌಕರಿ ಕೊಡಬೇಕು. ಅಲ್ಲಿವರೆಗೂ ಖಾಸಗಿ ನೌಕರಿ ಕೊಡಲು ನಾವು ಬದ್ಧರಾಗಿದ್ದೇವೆ. ನಮ್ಮ ಸಂಕಲ್ಪ, ನಮ್ಮ ಕೋರಿಕೆ , ನಮ್ನ ಮನವಿ. ಇವತ್ತು ಅವರನ್ನು ಈಶ್ವರಪ್ಪನ್ನ ಭ್ರಷ್ಟಾಚಾರದ ಕಾನೂನು ಅಡಿಯಲ್ಲಿ ಕೇಸ್ ದಾಖಲಿಸಬೇಕು, ಬಂಧಿಸಬೇಕು, ವಜಾ ಮಾಡಬೇಕು. ನಿಮ್ಮ ಆಫೀಸಲ್ಲಿ ಮುತ್ತು, ರತ್ನಗಳನ್ನು ಮಡಿಕೊಳ್ಳಿ. ಇಂತ ಮುತ್ತು ರತ್ನಗಳೇ ನಮಗೆ ಒಳ್ಳೆಯದು. ಇಂಥದ್ದನ್ನೆಲ್ಲಾ ಇಟ್ಟುಕೊಂಡರೆ ಶೋಭೆ ನಿಮಗೆ ಎಂದು ವ್ಯಂಗ್ಯವಾಡಿದ್ದಾರೆ.
ಹೆಣ್ಣು ಮಕ್ಕಳು ಮೂಗುತ್ತಿ, ಕಿವಿ ಓಲೆ ಇಟ್ಟುಕೊಳ್ಳುತ್ತಾರಲ್ಲ ಹಂಗೆ ಲಂಚ, ಮಂಚದವರನ್ನೆಲ್ಲ ಇಟ್ಟುಕೊಳ್ಳಿ ಬೊಮ್ಮಾಯಿ ಸಾಹೇಬರು. ನಾನು ಮತ್ತು ಸಿದ್ದರಾಮಯ್ಯನವರು, ಬೆಂಗಳೂರಿನಲ್ಲಿರುವ ಶಾಸಕರು ಇಂದು ರಾತ್ರಿ ಇಲ್ಲಿಯೇ ಇರ್ತೀವಿ. ನಮ್ಮ ಧರಣಿಯನ್ನು ಮುಂದುವರೆಸುತ್ತೇವೆ. 24 ಗಂಟೆಗಳ ಕಾಲ ನಮ್ಮ ಪ್ರಯಾಣ ಇಲ್ಲಿಯೇ ಇರುತ್ತೆ ಎಂದಿದ್ದಾರೆ.
ಇನ್ನು ಸೋಮವಾರ ಹೊಸ ಬಾಂಬ್ ಸಿಡಿಸುತ್ತೇನೆ ಎಂದು ಹೇಳಿರುವ ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ ಡಿಕೆಶಿ, ಮೊದಲು ಬಿಚ್ಚಾದರೂ ಮಾಡಲಿ, ಏನು ಬೇಕಾದರೂ ಮಾಡಲಿ ಎಲ್ಲದ್ದಕ್ಕೂ ಸಿದ್ಧವಿದ್ದೇವೆ. ನೋಡಿದ್ರಲ್ಲ ಬಿಚ್ಚಿ ಎಲ್ಲಾ ತೋರಿಸಿದ್ದಾರೆ. ಇನ್ಯಾಕೆ ನೋಡೋದು ಬಿಡ್ರಪ್ಪ ಎಂದಿದ್ದಾರೆ.