ರಾಮನಗರ: 2019ರಲ್ಲಿ ಆರಂಭವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದ ಮೇಲೆ ದಿನೇ ದಿನೇ ಆ ವಿಚಾರ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೂ ಇನ್ನೂ ಕೂಡ ಅಂದಿನ ಮೈತ್ರಿ ಸರ್ಕಾರ ಬೀಳಿಸಿದವರು ಯಾರು ಎಂಬ ಚರ್ಚೆ ನಡೆಯುತ್ತಲೇ ಇದೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಉರುಳಿಸಿದ್ದು, ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ.
ಬಿಡದಿಯ ತಮ್ಮ ತೋಟದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಪಬ್ಲಿಕ್ ನಲ್ಲಿ, ನನ್ನ ಕೈಯನ್ನು ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕನ ಮಾತುಗಳನ್ನು ನಂಬಿ ನಾನು ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡುರಸ್ತೆಯಲ್ಲಿ ಕೈ ಬಿಟ್ಟು ಎತ್ತು ಹಾಗೂ ಗಾಡಿ ತೆಗೆದುಕೊಂಡು ಹೊರಟೆ ಬಿಟ್ಟರು ಎಂದು ಹೇಳಿ, 2018ರಲ್ಲಿ ಸರ್ಕಾರ ಬೀಳಿಸಿದ್ದು ಡಿಕೆ ಶಿವಕುಮಾರ್ ಅವರಿಂದಾನೇ ಹೊರತು ನನ್ನಿಂದಲ್ಲ ಎಂದಿದ್ದಾರೆ.
ನನಗೂ ರಮೇಶ್ ಜಾರಕಿಹೊಳಿಗೂ ದ್ವೇಷ ಇತ್ತಾ..? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ. ನಾನು ಕುಮಾರಣ್ಣನ ಸರ್ಕಾರ ಉಳಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೀನಿ ಅಂತ ಮೊಸಳೆ ಕಣ್ಣೀರಿನ ಪ್ರಚಾರ ಮಾಡಿದರು. ಆಮೇಲೆ ನೋಡಿದರೆ ಒಳಗೊಳಗೆ ಎಲ್ಲರವನ್ನು ಮಾಡಿದ್ದರು ಎಂದಿದ್ದಾರೆ.