ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯಲ್ಲಿ ಡಿ.ಜೆ. ಬಳಕೆ : ಆರು ಮಂದಿ ವಿರುದ್ಧ ಕ್ರಿಮಿನಲ್ ಕೇಸ್

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 : ಇದೇ ಸೆಪ್ಟೆಂಬರ್ 13 ರಂದು ನಗರದಲ್ಲಿ ನಡೆದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಶೋಭಾಯಾತ್ರೆಯಲ್ಲಿ ಡಿ.ಜೆಗಳನ್ನು ಬಳಕೆ ಮಾಡಿದ ಡಿ.ಜೆ ಮಾಲೀಕರು ಮತ್ತು ವಾಹನಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು,
ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆಯ ವೇಳೆಯಲ್ಲಿ ಡಿ.ಜೆ ಸಿಸ್ಟಂಗಳನ್ನು ಮತ್ತು ಅತೀ ಹೆಚ್ಚು ಶಬ್ದ ಹೊರಸೂಸುವ ಉಪಕರಣಗಳನ್ನು ಬಳಸದಂತೆ ನಿಷೇಧಿಸಿ ಆದೇಶಿಸಲಾಗಿತ್ತು. ಲಕ್ಷಾಂತರ ಸಾರ್ವಜನಿಕರು ಸೇರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಿಂದೂ ಮಹಾ ಗಣಪತಿಯ ಉತ್ಸವ ಸಮಿತಿಯವರೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರವರು ವಿವಿಧ ದಿನಾಂಕಗಳಂದು ಸಭೆಗಳನ್ನು ನಡೆಸಿ ಸಭೆಗಳಲ್ಲಿ ಅತೀ ಹೆಚ್ಚಿನ ಶಬ್ದ ಹೊರಸುಸುವ ಡಿ.ಜೆಗಳನ್ನು ಬಳಸಬಾರದೆಂದು, ಘನ ಸರ್ವೋಚ್ಚ ನ್ಯಾಯಾಲಯವು ನಿಗದಿಪಡಿಸಿರುವ ಡೆಸಿಬಲ್‌ನ್ನು ಮೀರಬಾರದು ಅಂತ ಸೂಚಿಸಲಾಗಿತ್ತು.

ಆದರೆ ಈ ಎಲ್ಲಾ ಆದೇಶಗಳನ್ನು ಮತ್ತು ಷರತ್ತುಗಳನ್ನು ಉಲ್ಲಂಘಿಸಿ ಶೋಭಾಯಾತ್ರೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆಯದೇ, ನಿಯಮಬಾಹಿರವಾಗಿ ಮೆರವಣಿಗೆಯಲ್ಲಿ ಅತೀ ಹೆಚ್ಚಿನ ಶಬ್ದ ಹೊರಸೂಸುವ ಡಿ.ಜೆಗಳನ್ನು ಒಂದರ ಹಿಂದೆ ಒಂದರಂತೆ ನಿಲ್ಲಿಸಿಕೊಂಡು ಬಳಕೆ ಮಾಡಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಕಿರಿಕಿರಿ ಮತ್ತು ಉಪದ್ರವ ಉಂಟು ಮಾಡಿರುತ್ತಾರೆ.

ಆದ್ದರಿಂದ ಶೋಭಾಯಾತ್ರೆಯಲ್ಲಿ ಬಳಸಲಾಗಿದ್ದ ಎಲ್ಲಾ 06 ಡಿ.ಜೆ ಗಳ ಮಾಲೀಕರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೆಕ್ಟರ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಚಿತ್ರದುರ್ಗ ತಾಲ್ಲೂಕ್ ದಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ರವರು ನೀಡಿದ ದೂರಿನನ್ವಯ 06 ಡಿ.ಜೆ ಗಳ ಮಾಲೀಕರುಗಳು ಮತ್ತು ಡಿ.ಜೆ ಗಳನ್ನು ಅಳವಡಿಸಿದ್ದ ವಾಹನಗಳ ವಿರುದ್ಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Enable Notifications OK No thanks