ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಸಿರುವುದು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿ ಬಗ್ಗೆ ಆಧಾರವಿಲ್ಲದ ಮಾತುಗಳನ್ನಾಡಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮೋದಿ ಹಾಗೂ ಕಟೀಲ್ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
2014 ರ ಚುನಾವಣಾ ಪೂರ್ವದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಆಸೆ ಹುಟ್ಟಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿದ್ದರೂ ಇನ್ನು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ಕೊನೆಗೆ ಪಕೋಡ ಮಾರಿ ಎಂದು ವ್ಯಂಗ್ಯವಾಡಿದರು.
ಇಷ್ಟು ಸಾಲದೆಂಬಂತೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಿಸಿ ಬಡವರು, ಮಧ್ಯಮ ವರ್ಗದವರು, ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವುದೇ ಬಿಜೆಪಿ.ಸಾಧನೆ ಎಂದು ಟೀಕಿಸಿದ ಪ್ರತಿಭಟನಾಕಾರರು ರಾಹುಲ್‍ಗಾಂಧಿಯನ್ನು ಡ್ರಗ್ ಪೆಡ್ಲರ್ ಎಂದು ಹೇಳಿರುವ ನಳೀನ್‍ಕುಮಾರ್ ಕಟೀಲ್ ಕ್ಷಮೆ ಯಾಚಿಸಬೇಕೆಂದು ಎಚ್ಚರಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಉಪಾಧ್ಯಕ್ಷ ಶಶಾಂಕ್, ರಾಜ್ಯ ಕಾರ್ಯದರ್ಶಿಗಳಾದ ಎಂ.ಡಿ.ಹಸನ್‍ತಾಹೀರ್, ರಫಿ, ಬ್ಲಾಕ್ ಅಧ್ಯಕ್ಷರುಗಳಾದ ಮಹಮದ್ ಆಜಾಂ, ಬಾಬು, ಹರೀಶ್, ಮುಬಾರಕ್, ಯಶವಂತ್, ಕೆ.ಪಿ.ಸಿ.ಸಿ.ಸಹ ಸದಸ್ಯ ಜಿ.ವಿ.ಮಧುಗೌಡ, ಜಿಲ್ಲಾ ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಶಶಿಕಿರಣ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.