ದಿನಪತ್ರಿಕೆ ವಿತರಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ/ಹಂಚಿಕೆದಾರರ ಸಂಘ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.21) : ದಿನಪತ್ರಿಕೆ ವಿತರಕರಿಗಾಗಿ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ(ರಿ) ಬೆಂಗಳೂರು, ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ/ಹಂಚಿಕೆದಾರರ ಸಂಘದಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪತ್ರಿಕಾ ವಿತರಕರಿಗೆ ಈವಿಎಂ ಬೈಕ್ ಹಾಗೂ ಮೊಪೆಡ್ ತೆಗೆದುಕೊಳ್ಳಲು ಹೆಚ್ಚುವರಿಯಾಗಿ ಸಬ್ಸಿಡಿ ಮಂಜೂರು ಮಾಡುವುದು, 0 ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು.
ಪತ್ರಿಕಾ ವಿತರಕರು ಪತ್ರಿಕೆ ಹಂಚುವ ಸಂದರ್ಭದಲ್ಲಿ ಮೃತಪಟ್ಟಲ್ಲಿ ಐದು ಲಕ್ಷ ರೂ. ಸಹಾಯಧನ ನೀಡಬೇಕು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆ ವೆಚ್ಚ ಭರಿಸಬೇಕು.

ಪತ್ರಿಕಾ ವಿತರಕರ ಮಕ್ಕಳಿಗಾಗಿ ಉಚಿತ ಶಿಕ್ಷಣ ಸೌಲಭ್ಯ ಒದಗಿಸುವುದು. ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಹಾಯ ಧನ ಕೊಡಬೇಕು. 65 ವರ್ಷ ಮೇಲ್ಪಟ್ಟ ಪತ್ರಿಕಾ ವಿತರಕರಿಗೆ ಅವರ ವೃತ್ತಿಯನ್ನು ಗೌರವಿಸಿ ಪಿಂಚಣಿ ಸೌಲಭ್ಯ ಕೊಡಬೇಕು. ಪತ್ರಿಕಾ ವಿತರಕರನ್ನು ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪರಿಗಣಿಸಿ ಗೌರವಿಸಬೇಕು.
ಆಶ್ರಯ ಯೋಜನೆಯಡಿ ಪತ್ರಿಕಾ ವಿತರಕರಿಗೂ ನಿವೇಶನಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದರು.

2013 ರ ಅವಧಿಯಲ್ಲಿ ತಾವುಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2018-19 ರ ಬಜೆಟ್‍ನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ನಿಧಿಗಾಗಿ ಎರಡು ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೀರಿ. ಬಿಜೆಪಿ.ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಜಾರಿಯಾಗಲಿಲ್ಲ. ಹಾಗಾಗಿ ನಮ್ಮ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸುವಂತೆ ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ/ಹಂಚಿಕೆದಾರರ ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಜಿಲ್ಲಾಡಳಿತ ಮೂಲಕ ರಾಜ್ಯದ ಮುಖ್ಯಮಂತ್ರಿಯನ್ನು ಆಗ್ರಹಿಸಿದರು.

ಉಪಾಧ್ಯಕ್ಷ ಕುಬೇಂದ್ರಪ್ಪ, ಮೋಹನ್‍ಕುಮಾರ್, ಮಲ್ಲಿಕಾರ್ಜುನ್, ಆರ್.ಪ್ರಶಾಂತ್, ಕರಿಯಪ್ಪ, ನಾಗರಾಜ್‍ಶೆಟ್ಟಿ, ತಿಪ್ಪೇಸ್ವಾಮಿ ಜಿ. ಕರಿಬಸಪ್ಪ, ಸುನೀಲ್, ಮಂಜುನಾಥನಾಯ್ಡು, ಮಾರುತಿ, ತಿಪ್ಪೇಸ್ವಾಮಿ, ಮೈಲಾರಿ, ಓಂಕಾರಪ್ಪ, ದುಗ್ಗಪ್ಪ, ಚಂದ್ರಶೇಖರ್ ಸೇರಿದಂತೆ ಅನೇಕ ವಿತರಕರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *