ಚಿತ್ರದುರ್ಗ,(ಅಕ್ಟೋಬರ್12) : ಕ್ಷಯದ ಬಗ್ಗೆ ಭಯ ಬೇಡ ಜಾಗೃತಿ ಇರಲಿ. ಚಿಕಿತ್ಸೆಗೆ ಯಾವುದೇ ಭಯವಿಲ್ಲದೆ ಮುಂದಾಗಬೇಕು. ಕ್ಷಯ ಶಾಪವಲ್ಲ ಇದಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸುಧಾ ತಿಳಿಸಿದರು.
ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ 5 ಜನ ಮತ್ತು ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದ 5ಜನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.
ಕ್ಷಯದ ಬಗ್ಗೆ ಇರುವ ಮೂಢನಂಬಿಕೆಯನ್ನು ಸಂಪೂರ್ಣವಾಗಿ ತೊಲಗಿಸಿ, ಅದರ ಬಗ್ಗೆ ಅರಿವು ಮೂಡಿಸುವಲ್ಲಿ ಎಲ್ಲರೂ ಸಹಕರಿಸಬೇಕು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು ಕಾಣಿಸಿಕೊಳ್ಳುವುದು, ಹಸಿವು ಆಗದಿರುವುದು, ಸಂಜೆ ವೇಳೆಯಲ್ಲಿ ಜ್ವರ ಮತ್ತು ಬೆವರುವುದು ಹೀಗೆ ಯಾವುದಾದರೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಯಾವುದಾದರು ಕ್ಷಯರೋಗಿ ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಂತಹ ರೋಗಿಯ ಸಂಪರ್ಕಕ್ಕೆ ಬರುವಂತಹ ಗರ್ಭಿಣಿ, ಬಾಣಂತಿ ಹಾಗೂ ಚಿಕ್ಕ ಮಕ್ಕಳಿಗೂ ಕೂಡ ಕ್ಷಯ ರೋಗ ಹರಡಬಹುದು. ಆದ್ದರಿಂದ ಕ್ಷಯ ರೋಗದ ಯಾವುದಾದರೂ ಲಕ್ಷಣ ಕಂಡುಬಂದಲ್ಲಿ ಹತ್ತಿರದ ವೈದ್ಯಾಧಿಕಾರಿಗಳಿಗೆ ಬಂದು ತೋರಿಸಲು ಮುಂದಾಗಬೇಕು ಹಾಗೂ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಚಿಕಿತ್ಸೆಯ ಜೊತೆಯಲ್ಲಿ ಪ್ರತಿ ತಿಂಗಳು ನಿಕ್ಷಯ್ ಪೋಷನ್ ಯೋಜನೆ ಅಡಿಯಲ್ಲಿ 500 ರೂ ರಂತೆ ಆರು ತಿಂಗಳವರೆಗೆ ಮೂರು ಸಾವಿರ ರೂಗಳನ್ನು ಪ್ರತಿ ರೋಗಿಗೆ ಆನ್‍ಲೈನ್ ಮೂಲಕ ನೀಡಲಾಗುತ್ತದೆ. ಜೊತೆಯಲ್ಲಿ ಇನ್ನೂ ಹೆಚ್ಚಿನ ಪೌಷ್ಠಿಕಾಂಶ ದೊರೆಯುವಲ್ಲಿ ಆ ಗ್ರಾಮದ ಅನುಕೂಲಸ್ಥರು ಕ್ಷಯರೋಗಿಯನ್ನು ದತ್ತು ಪಡೆದು ಆರು ತಿಂಗಳವರೆಗೆ ಆಹಾರ ನೀಡಿದ್ದಲ್ಲಿ ರೋಗಿಗಳಿಗೆ ಸಹಾಯವಾಗುತ್ತದೆ ಹಾಗೂ ಪ್ರಧಾನಮಂತ್ರಿಯವರ ಉದ್ದೇಶದಂತೆ ಕ್ಷಯ ಮುಕ್ತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ, ಸಹಾಭಾಗಿತ್ವ ಅತ್ಯಗತ್ಯವಾಗಿ ಬೇಕು ಎಂದು ತಿಳಿಸಿದರು.
ಪೌಷ್ಟಿಕ ಆಹಾರದ ಕಿಟ್ ವಿತರಿಸುವ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ.ಬಿ, ಆರೋಗ್ಯ ನಿರೀಕ್ಷಣಾ ಅಧಿಕಾರಿ ರಂಗಪ್ಪ, ಲ್ಯಾಬ್ ಟೆಕ್ನಿಷಿಯನ್ ರಮೇಶ್, ರಾಘವೇಂದ್ರ ಎಸ್‍ಟಿಎಸ್, ಶುಶ್ರೂಷಣಾ ಅಧಿಕಾರಿ ಮಂಜುಶ್ರೀ, ಆರೋಗ್ಯ ಸುರಕ್ಷಾ ಅಧಿಕಾರಿ ಭಾರತಿ, ಕಾರ್ಯಕರ್ತೆಯರಾದ ಇಂದ್ರಮ್ಮ, ಗೌರಮ್ಮ, ಲಕ್ಷ್ಮೀ ಕವಿತಾ ವಿಜಯಮ್ಮ ಇದ್ದರು.