ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.28) : ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣ, ಹಾಸ್ಟೆಲ್ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಜಿಲ್ಲಾ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಜಿಲ್ಲಾ ಮಟ್ಟದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವವನ್ನು ಜು.30 ರಂದು ಬೆಳಿಗ್ಗೆ 10-30 ಕ್ಕೆ ಕ್ರೀಡಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಳಸಮುದಾಯಕ್ಕೆ ಸೇರಬೇಕಾಗಿರುವ ಹಣದಲ್ಲಿ ರಾಜಕಾರಣಿಗಳು ಸಿ.ಸಿ.ರಸ್ತೆಗೆ ಹಾಕಿ ಕಮೀಷನ್ ಹೊಡೆಯುವುದರಲ್ಲಿ ಕಾಲ ಕಳೆದರೆ ವಿನಃ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣ ಹಾಗೂ ಹಾಸ್ಟೆಲ್ ಸೌಲಭ್ಯಕ್ಕೆ ಒತ್ತು ಕೊಡಲಿಲ್ಲ. ಆಗ ನಾನು ಹೋರಾಡಿದ ಫಲವಾಗಿ ಚಿತ್ರದುರ್ಗಕ್ಕೆ ಮೂರು ಹಾಸ್ಟೆಲ್‍ಗಳನ್ನು ನೀಡಲಾಗಿದೆ. ಹಾಗಾಗಿ ಈ ಸಮ್ಮೇಳನದ ಮೂಲಕ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರಲ್ಲಿ ಉತ್ತೇಜನ ತುಂಬಲಾಗುವುದು ಎಂದು ಹೇಳಿದರು.
ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್‍ಜೋಗಿ ಮಾತನಾಡಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವವನ್ನು ನಗರದಲ್ಲಿ ಏರ್ಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಲಿದ್ದಾರೆ.
ಮುರುಘಾಮಠದ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಶಾಸಕರುಗಳಾದ ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಬಿ.ಜಿ.ಗೋವಿಂದಪ್ಪ, ಕೆ.ಸಿ.ವೀರೇಂದ್ರಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಒಕ್ಕೂಟದ ಅಧ್ಯಕ್ಷ ತುಕಾರಾಮ ನಾಗಪ್ಪ ವಾಪರ ಇನ್ನು ಅನೇಕು ಆಗಮಿಸಲಿದ್ದಾರೆ.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು, ಕಲೆ ಸಾಂಸ್ಕøತಿಕ ಸಮಾಜಸೇವೆ, ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರನ್ನು ಕಲೋತ್ಸವದಲ್ಲಿ ಸನ್ಮಾನಿಸಲಾಗುವುದು. ಗೋಸಾಯಿಗಳು, ಚಿಂದಿ ಆರಿಸುವವರು, ಕಿನ್ನರಿಜೋಗಿಗಳು, ದಾಸರು ಹೀಗೆ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರು ತಮ್ಮ ತಮ್ಮ ಕುಲಕಸುಬನ್ನು ಸೂಚಿಸುವ ವೇಷಗಳನ್ನು ಧರಿಸಿ ಕಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ, ರಾಜ್ಯ ಕಾರ್ಯಾಧ್ಯಕ್ಷೆ ಎಸ್.ಆರ್.ಇಂದಿರಾ ಗುರುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಬೇಂದ್ರಪ್ಪ ದಾಸರ್, ತಾಲ್ಲೂಕು ಅಧ್ಯಕ್ಷ ಹೆಂಜಾರಪ್ಪ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಚಿಕ್ಕಣ್ಣ, ಗೊಲ್ಲ ಸಮುದಾಯದ ಎಸ್.ಲಕ್ಷ್ಮಿಕಾಂತ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.