ನಾಯಕನಹಟ್ಟಿಯಲ್ಲಿ ಜನವರಿ 21 ಮತ್ತು 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಕೆ.ಎಂ. ಶಿವಸ್ವಾಮಿ

ಚಿತ್ರದುರ್ಗ, (ಡಿ.18) : 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು  2023 ನೇ ಇಸವಿ ಜ. 21 ಮತ್ತು 22 ರಂದು ನಾಯಕನಹಟ್ಟಿಯಲ್ಲಿ ಏರ್ಪಡಿಸಲು ಭಾನುವಾರ ಜರುಗಿದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ನಾಯಕನಹಟ್ಟಿಯು ಜಿಲ್ಲೆಯ ಪ್ರಮುಖವಾದ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ. 20 ವರ್ಷಗಳ ಹಿಂದೆ ಪಟ್ಟಣದಲ್ಲಿ ತಾಲ್ಲೂಕು ಸಮ್ಮೇಳನ ಜರುಗಿತ್ತು.

ಸಮ್ಮೇಳನದ ಅಧ್ಯಕ್ಷರನ್ನು ಶೀಘ್ರದಲ್ಲಿ ತೀರ್ಮಾನಿಸಲಾಗುವುದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ಜ. 6 ರಿಂದ ಮೂರು ದಿನಗಳ ಕಾಲ ಜರುಗಲಿದೆ. ಇದಾದ ನಂತರ ರಾಜ್ಯದಲ್ಲಿ ಜಿಲ್ಲಾ ಸಮ್ಮೇಳನಗಳು ಆರಂಭವಾಗಲಿವೆ.

ಜಿಲ್ಲಾ ಸಮ್ಮೇಳನಕ್ಕೆ ಪ್ರತಿ ತಾಲ್ಲೂಕಿನಿಂದ ಇಬ್ಬರು ಕವಿಗಳು, ಹಾಗೂ ಸನ್ಮಾನಿತರ ಹೆಸರನ್ನು ಕಳಿಸಲು ಸೂಚಿಸಲಾಯಿತು. ಜಿಲ್ಲಾ ಸಮ್ಮೇಳನ ಆಯೋಜಿಸುವ ಬಗ್ಗೆ ಹಲವು ಸುತ್ತಿನ ಸಭೆಗಳು ಜರುಗಲಿವೆ.
ಫೆಬ್ರವರಿ ಅಥವ ಮಾರ್ಚ ತಿಂಗಳಲ್ಲಿ ಎರಡು ತಾಲ್ಲೂಕು ಸಮ್ಮೇಳನಗಳನ್ನು ಏರ್ಪಡಿಸಲಾಗುವುದು.

ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕು ಅಧ್ಯಕ್ಷರುಗಳು ತಾಲ್ಲೂಕು ಸಮ್ಮೇಳನಗಳನ್ನು ಏರ್ಪಡಿಸಲು ನಿರ್ಧರಿಸಿದ್ದಾರೆ. ರಾಜ್ಯ ಸಮಿತಿ ಒಪ್ಪಿಗೆ ನೀಡಿದರೆ ಇತರೆ ತಾಲ್ಲೂಕುಗಳಲ್ಲಿ ಸಮ್ಮೇಳನಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಎಲ್ಲ ತಾಲ್ಲೂಕುಗಳ ಅಧ್ಯಕ್ಷರುಗಳು ವಾರ್ಷಿಕ ವರದಿಯನ್ನು ಮಂಡಿಸಿದರು. ತಾಲ್ಲೂಕು ಘಟಕಗಳನ್ನು ಇನ್ನಷ್ಟು ಬಲಪಡಿಸಲು ತಿಂಗಳಿಗೆ ಕನಿಷ್ಟ ಒಂದು ಕಾರ್ಯಕ್ರಮವಾದರೂ ರೂಪಿಸುವಂತೆ ಸೂಚಿಸಲಾಯಿತು.  ಸಭೆಯಲ್ಲಿ ತಾಲ್ಲೂಕು ಕಸಾಪ ಹೆಚ್ಚಿನ ಅನುದಾನ ಒದಗಿಸುವಂತೆ ಕೇಂದ್ರ ಪರಿಷತ್ತನ್ನು ಒತ್ತಾಯಿಸುವಂತೆ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಒತ್ತಾಯಿಸಿದರು.
ಸಮ್ಮೇಳನಕ್ಕೆ ಎಲ್ಲರಿಗೂ ಮುಕ್ತ ಅವಕಾಶ
ಹಾವೇರಿಯಲ್ಲಿ ಜರುಗುವ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ 500 ರೂಗಳನ್ನು ಪಾವತಿಸಿ ಭಾಗವಹಿಸಲು ಅವಕಾಶವಿದೆ. ಆಪ್ ಲೈನ್ ಮತ್ತು ಆನ್‍ಲೈನ್ ನೊಂದಣಿ ಮಾಡಿಸಲು ಅವಕಾಶ ಒದಗಿಸಲಾಗಿದೆ.

ಕಸಾಪ ಆಜೀವ ಸದಸ್ಯರು ಮತ್ತು ಸದಸ್ಯರಾಗಿಲ್ಲದವರು ಸಹ ಸಮ್ಮೇಳನಕ್ಕೆ ನೊಂದಣಿ ಮಾಡಲು ಅವಕಾಶವಿದೆ. ಡಿ. 18 ಕ್ಕಿದ್ದ ಅಂತಿಮ ದಿನಾಂಕವನ್ನು ಡಿ. 24 ರವರೆಗೆ ವಿಸ್ತರಿಸಲಾಗಿದೆ. ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡುವಂತೆ ಸೂಚಿಸಲಾಯಿತು.

ಚಿತ್ರದುರ್ಗ ಅಧ್ಯಕ್ಷ ರಾಮಲಿಂಗ ಶ್ರೇಷ್ಠಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಡಾ.ನಾಗೇಶ್, ಹೊಸದುರ್ಗ ಅಧ್ಯಕ್ಷ ಓಂಕಾರಪ್ಪ, ಚಳ್ಳಕೆರೆ ಅಧ್ಯಕ್ಷರಾದ ಜಿ.ಟಿ.ವೀರಭದ್ರಸ್ವಾಮಿ, ಹೊಳಲ್ಕೆರೆ ಅಧ್ಯಕ್ಷ ಶಿವಮೂರ್ತಿ, ಮೊಳಕಾಲ್ಮೂರು ಅಧ್ಯಕ್ಷರಾದ ಜಿಂಕಾ ಶ್ರೀನಿವಾಸ್, ಜಿಲ್ಲಾ ಪದಾಧಿಕಾರಿಗಳಾದ ಕೆ.ಪಿ.ಎಂ. ಗಣೇಶಯ್ಯ, ಶ್ರೀನಿವಾಸ ಮಳಲಿ, ಸಿ.ಲೋಕೇಶ್, ರೀನಾ ವೀರಭದ್ರಪ್ಪ, ಕೆಂಚವೀರಪ್ಪ, ಚಂದ್ರಿಕ, ಡಾ. ಪರಮೇಶ್ವರಪ್ಪ, ರೇವಣಸಿದ್ದಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!