ನಾಯಕನಹಟ್ಟಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಲೋಗೋ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು

suddionenews
1 Min Read

ಚಿತ್ರದುರ್ಗ, (ಜ.10) : ನಾಡು,ನುಡಿಗಾಗಿ ನಮ್ಮ ಸಮಯವನ್ನು ಮೀಸಲಿರಿಸುವುದು ಅಗತ್ಯ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು ಹೇಳಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಬಿಡುಗಡೆ ಮಾತನಾಡಿದರು.

ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳವಾದ ನಾಯಕನಹಟ್ಟಿಯಲ್ಲಿ ಜಿಲ್ಲಾ ಸಮ್ಮೇಳನ ಜರುಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿಯ ಮಣ್ಣಿನ ಋಣವನ್ನು ನಾವು ಇದರ ಮೂಲಕ ತೋರುವುದು ಅಗತ್ಯ. ಕನ್ನಡವನ್ನು ನಾವು ಉತ್ತಮವಾಗಿ ಕಲಿತಿದ್ದೇವೆ. ಈ ಭಾಷೆಗೆ ತನ್ನದೇ ಆದ ಅಸ್ತಿತ್ವವಿದೆ. ಸಮ್ಮೇಳನಗಳಿಂದ ಜನರು ಜಾಗೃತಗೊಳ್ಳುತ್ತಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ನಾಯಕನಹಟ್ಟಿಯಲ್ಲಿ ಜ.21 ಮತ್ತು 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.

ಇದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಲೋಗೋವನ್ನು ಅತ್ಯಂತ ವಿಶಿಷ್ಟವಾಗಿ ನಿರ್ಮಿಸಲಾಗಿದೆ. ಲೋಗೋ ಹಿನ್ನೆಲೆಯಲ್ಲಿ ಚಿತ್ರದುರ್ಗದ ಕೋಟೆಯಿದೆ. ಹಾವೇರಿ ಸಮ್ಮೇಳನ ಮಾದರಿಯನ್ನು ಇಲ್ಲಿ ಅಳವಡಿಸಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳವಾದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ತೇರು, ಭಾವಚಿತ್ರ, ಹಟ್ಟಿಮಲ್ಲಪ್ಪನಾಯಕರ ಭಾವಚಿತ್ರವಿದೆ. ಇದರ ಜತೆಗೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ತಿಪ್ಪೇರುದ್ರಸ್ವಾಮಿಯವರ ನುಡಿಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿರುವ ಏಕೈಕ ಗುಹಾಂತರ ದೇವಾಲಯ ನಾಯಕನಹಟ್ಟಿ ಪಟ್ಟಣದ ಬಳಿ ಹೊಸ ಗುಡ್ಡದಲ್ಲಿದೆ. ಅಲ್ಲಿರುವ ರಾಮಲಿಂಗೇಶ್ವರ ದೇವಾಲಯವನ್ನು ಲೋಗೋದಲ್ಲಿ ಬಳಸಿಕೊಳ್ಳಲಾಗಿದೆ. ಸಾಹಿತ್ಯ ಪರಿಷತ್ತಿನ ಲೋಗೋ ಮತ್ತು ಧ್ವಜವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಮಾತನಾಡಿ, ಸಮ್ಮೇಳನದ ಅಧ್ಯಕ್ಷರನ್ನಾಗಿ ತಿಪ್ಪಣ್ಣ ಮರಿಕುಂಟೆಯವರನ್ನು ಆಯ್ಕೆ ಮಾಡಿರುವುದು ಅತ್ಯಂತ ಉತ್ತಮ ಸಂಗತಿಯಾಗಿದೆ. ಹಿರಿಯ ಪತ್ರಕರ್ತರಾಗಿ ಸಾಹಿತಿಯಾದ ಅವರು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಜಿಲ್ಲಾ ಕೇಂದ್ರದ ಜತೆಗೆ ಎಲ್ಲ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸುವುದು ಅಗತ್ಯ ಎಂದು ಹೇಳಿದರು.

ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಡಿಯಟ್ ಉಪನ್ಯಾಸಕ ಆರ್.ನಾಗರಾಜ್, ಕಸಾಪ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಸಿ.ಲೋಕೇಶ್, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಮಳಲಿ, ವಿ.ಧನಂಜಯ್ ಪತ್ರಕರ್ತರಾದ ಲಕ್ಷ್ಮಣ್, ನರೇನಹಳ್ಳಿ ಅರುಣ್‍ಕುಮಾರ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *