in ,

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷರಿಗೆ ಅಗೌರವ, ಬೇಷರತ್ತಾಗಿ ಕ್ಷಮಾಯಾಚನೆಗೆ ಚಿಕ್ಕಪ್ಪನಹಳ್ಳಿ ಷಣ್ಮುಖ ಅಗ್ರಹ

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಜ.23): ಪುಣ್ಯಕ್ಷೇತ್ರ ನಾಯಕನಹಟ್ಟಿಯಲ್ಲಿ ಎರಡು ದಿನಗಳ ಕಾಲ ನಡೆದ ಹದಿನಾರನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಬಿ.ತಿಪ್ಪಣ್ಣ ಮರಿಕುಂಟೆರವರನ್ನು ಅಗೌರವಿಸಿರುವುದು ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನ.

ಅದಕ್ಕಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಸಂಘಟಕರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖರವರು ಆಗ್ರಹಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ತನ್ನದೇ ಆದ ಶಿಷ್ಠಾಚಾರವಿದೆ. ಸಮ್ಮೇಳನಕ್ಕೂ ಮುಂಚೆ ಆಹ್ವಾನ ಪತ್ರಿಕೆ ಎಲ್ಲಾ ಅಜೀವ ಸದಸ್ಯರಿಗೂ ತಲುಪಬೇಕಿತ್ತು. ಪತ್ರಕರ್ತರಿಗೂ ಆಹ್ವಾನ ಪತ್ರಿಕೆ ನೀಡದೆ ಕಡೆಗಣಿಸಿರುವುದು ಒಂದೆಡೆಯಾದರೆ ಸಮ್ಮೇಳನದ ಸರ್ವಾಧ್ಯಕ್ಷ ಬಿ.ತಿಪ್ಪಣ್ಣ ಮರಿಕುಂಟೆ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿದ್ದಾಗ ಸಮಯದ ಅಭಾವವಿದೆ. ಮಾತು ನಿಲ್ಲಿಸಿ ಎಂದು ಚೀಟಿ ಕಳಿಸಿ ಅವಮಾನಿಸಿರುವುದು ಸಹಿಸಲಾರದ ಅಕ್ಷಮ್ಯ ಅಪರಾಧ. ಸಮ್ಮೇಳನಾಧ್ಯಕ್ಷರನ್ನು ಮನೆಯಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಹೋಗಿ ಸಮ್ಮೇಳನ ಮುಗಿದ ನಂತರ ಗೌರವದಿಂದ ಮನೆಗೆ ಕರೆದುಕೊಂಡು ಹೋಗಿ ಬಿಡಬೇಕಿತ್ತು. ಇದ್ಯಾವುದನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಷಣ ಮಾಡುವಾಗ ಸಂಘಟಕರು ಚೀಟಿ ಕಳಿಸಿದ್ದರಿಂದ ನೊಂದ ಮನಸ್ಸಿನಿಂದ ಭಾಷಣವನ್ನು ಮೊಟಕುಗೊಳಿಸಿದ ಬಿ.ತಿಪ್ಪಣ್ಣ ಮರಿಕುಂಟೆ ಇನ್ನು ಮಾತನಾಡುವ ಅನೇಕ ವಿಚಾರಗಳಿದ್ದವು ಎಂದು ಹೇಳಿಕೊಂಡಿದ್ದನ್ನು ನೋಡಿದರೆ ಎಷ್ಟು ಬೇಸರಪಟ್ಟುಕೊಂಡಿರಬಹುದು ಎನ್ನುವುದು ತಿಳಿಯುತ್ತದೆ.

ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಕಟ್ಟಿಬೆಳೆಸಿದ ಸಮ್ಮೇಳನದ ಸರ್ವಾಧ್ಯಕ್ಷರನ್ನು ಈ ರೀತಿ ಕೀಳಾಗಿ ನಡೆಸಿಕೊಳ್ಳಬಾರದಿತ್ತು.

ವೇದಿಕೆಯಲ್ಲಿ ವಿಚಾರಗೋಷ್ಠಿಗಳಲ್ಲಿ ವಿಷಯ ಮಂಡಿಸಲು ಬಂದವರಿಗೂ ಸರಿಯಾದ ಕುರ್ಚಿಗಳ ವ್ಯವಸ್ಥೆಯಿರಲಿಲ್ಲ. ಸಮಾರೋಪ ಸಮಾರಂಭಕ್ಕೆ ಖಾಲಿ ಕುರ್ಚಿಗಳಿದ್ದವು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮೀಣ ಮಟ್ಟದಲ್ಲಿ ನಡೆದಿದ್ದು, ನಮಗೆಲ್ಲಾ ಖುಷಿಯಾಯಿತು. ಸಂಘಟಕರು ಮಾಡಿರುವ ಅಚಾತುರ್ಯವನ್ನು ಕೇಂದ್ರ ಸಾಹಿತ್ಯ ಪರಿಷತ್ ಮನ್ನಿಸಬಾರದು.

ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಎಪ್ಪತ್ತೈದನೆ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರವನ್ನು ಇನ್ನು ಕೊಟ್ಟಿಲ್ಲದ ಕಾರಣ ಉಳಿದಿರುವ 35 ಲಕ್ಷ ರೂ.ಹಿಡಿಗಂಟು ಕನ್ನಡ ಭವನ ಬಳಕೆಗೆ ಬಾರದಂತಾಗಿದೆ. ಹಾಗಾಗಿ ಸಾರ್ವಜನಿಕವಾಗಿ ಲೆಕ್ಕ ಬಹಿರಂಗಪಡಿಸಬೇಕು.

ನಾಯಕನಹಟ್ಟಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹಾಗೂ ಕೇಂದ್ರ ಸಾಹಿತ್ಯ ಪರಿಷತ್ ಹಣ ನೀಡಿದೆ. ಜೊತೆಗೆ ದಾನಿಗಳಿಂದ ಎಷ್ಟೆಷ್ಟು ಸಂಗ್ರಹಿಸಲಾಗಿದೆ ಎನ್ನುವುದನ್ನು ಹದಿನೈದು ದಿನಗಳಲ್ಲಿ ಕೊಡಬೇಕೆಂದು ಕಸಾಪ. ಅಧ್ಯಕ್ಷರನ್ನು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪತ್ರಕರ್ತ ಶ.ಮಂಜುನಾಥ್ ಮಾತನಾಡಿ ಎರಡು ದಿನಗಳ ಕಾಲ ನಾಯಕನಹಟ್ಟಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೌಜನ್ಯಕ್ಕಾದರೂ ನನಗೆ ಆಹ್ವಾನ ಪತ್ರಿಕೆ ಕೊಟ್ಟು ಆಹ್ವಾನಿಸಬೇಕಿತ್ತು. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯೂ ನನಗೆ ತಲುಪಿಲ್ಲ.

ನಾಲ್ಕೈದು ದಶಕಗಳಿಂದ ಸಾಹಿತ್ಯದ ಕೃಷಿಯಲ್ಲಿ ತೊಡಗಿರುವ ಬಿ.ತಿಪ್ಪಣ್ಣ ಮರಿಕುಂಟೆಯವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮೇಲೆ ಎಷ್ಟು ಸಮಯ ಬೇಕಾದರೂ ಭಾಷಣ ಮಾಡುವ ಸ್ವಾತಂತ್ರ್ಯವಿದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟಕರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಚೀಟಿ ನೀಡಿದ್ದು, ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು ?

ಕನ್ನಡ ಸಾಹಿತ್ಯ ಪರಿಷತ್‍ಗೆ ಒಂದು ಕೋಟಿ ಸದಸ್ಯರನ್ನು ನೊಂದಣಿ ಮಾಡಿಸುವ ಗುರಿಯಿಟ್ಟಿಕೊಂಡಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಈ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುವರೋ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಅಶೋಕ್ ಸಂಗೇನಹಳ್ಳಿ ಮಾತನಾಡುತ್ತ ನಾಯಕನಹಟ್ಟಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓಲೈಕೆ ಸಂಸ್ಕøತಿಯೇ ಜಾಸ್ತಿಯಾಗಿತ್ತು. ಜಿಲ್ಲೆಯ ಸಾಹಿತಿಗಳನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೊಸ ಅಧ್ಯಕ್ಷ ಕೆ.ಎಂ.ಶಿವಸ್ವಾಮಿರವರ ಮೊದಲ ಸಮ್ಮೇಳನವೇ ಈ ರೀತಿಯಾದರೆ ಇನ್ನು ಸಾಹಿತ್ಯ ಲೋಕಕ್ಕೆ ಇವರಿಂದ ಎಂತಹ ಕೊಡುಗೆಯನ್ನು ನಿರೀಕ್ಷಿಸಬಹುದು.

ಸಮ್ಮೇಳನದ ಸರ್ವಾಧ್ಯಕ್ಷ ಬಿ.ತಿಪ್ಪಣ್ಣ ಮರಿಕುಂಟೆಗೆ ಆಗಿರುವ ಅವಮಾನ ಕಪ್ಪುಚುಕ್ಕೆಯಿದ್ದಂತೆ. ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಸಂಘಟಕರು ರಾಜ್ಯದ ಆರು ಕೋಟಿ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು ಎಂದು ವಿನಂತಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಜನವರಿ 25 ರಂದು ವಿಶ್ವಹಿಂದು ಪರಿಷತ್ ಬಜರಂಗದಳ ಶೌರ್ಯಯಾತ್ರೆ : ಪ್ರಭಂಜನ್

ಆಟೋ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ