ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಜ.20): ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಅಗೌರವ ತೋರಿ ಸಭೆಯಿಂದ ಹೊರನಡೆದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ವಿರುದ್ದ ಜಿಲ್ಲಾ ಕಾಂಗ್ರೆಸ್‍ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಅಧಿಕಾರಿ ಎನ್ನುವುದನ್ನು ಮರೆತು ಬಿಜೆಪಿ ಏಜೆಂಟನಂತೆ ವರ್ತಿಸುತ್ತಿರುವ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ವಿರುದ್ದ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಶಾಸಕರು ಕೇಳಿದ ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡದೆ ಟೇಬಲ್ ಗುದ್ದಿ ನನ್ನ ಮೇಲೆ ಯಾರಿಗೆ ದೂರು ಕೊಡುತ್ತೀರೋ ಕೊಡಿ ನಾನು ಹೆದರುವವನಲ್ಲ ಎಂದು ಗೂಂಡಾನಂತೆ ವರ್ತಿಸಿ ಅವಾಜ್ ಹಾಕಿ ಸಭೆಗೆ ಅಗೌರವ ಎಸಗಿರುವ ತಹಶೀಲ್ದಾರ್ ಸರ್ಕಾರಿ ಅಧಿಕಾರಿಯಾಗಲು ನಾಲಾಯಕ್ ಎನ್ನುವುದು ಗೊತ್ತಾಗುತ್ತದೆ. ಇಂತಹ ದುರಂಹಕಾರಿ ಅಧಿಕಾರಿ ನಮ್ಮ ಜಿಲ್ಲೆಯಲ್ಲಿ ಇರುವುದು ಬೇಡ. ಹಾಗಾಗಿ ಕೂಡಲೆ ಇವರನ್ನು ವಜಾಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ನಾಗರಾಜ್ ಜಾನ್ಹವಿ, ಉಪಾಧ್ಯಕ್ಷರುಗಳಾದ ಡಿ.ಟಿ.ವೆಂಕಟೇಶ್, ರವಿಕುಮಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತ ನಂದಿನಿಗೌಡ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಇಂಟೆಕ್ ಅಧ್ಯಕ್ಷ ಅಶೋಕ್‍ನಾಯ್ಡು, ಸೈಯದ್ ಖುದ್ದೂಸ್, ಅಂಸಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಕ್ಷರುದ್ರಸ್ವಾಮಿ, ಕಾರ್ಯದರ್ಶಿ ರುದ್ರಾಣಿ ಗಂಗಾಧರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಪಾಪಣ್ಣ, ನರಹರಿ, ಲೋಕೇಶ್, ಗುರುಮೂರ್ತಿ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.