ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, ಜೂನ್. 07 : ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೋವಿಂದ ಕಾರಜೋಳರವರಿಗೆ ಜೆಡಿಎಸ್. ಆರ್‍ಎಸ್‍ಎಸ್, ಭಜರಂಗದಳ, ನರೇಂದ್ರಮೋದಿರವರ ಅಭಿಮಾನಿಗಳಿಂದ ಗೆಲುವು ಸಿಕ್ಕಿದೆಯೇ ವಿನಃ ಜಿಲ್ಲೆಯ ಬಿಜೆಪಿ ಮುಖಂಡರಿಂದಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ನೇರವಾಗಿ ಆಪಾದಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭೆ ಚುನಾವಣೆ ಆರಂಭದಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವ ಮುನ್ನ ಚರ್ಚಿಸಿ ಎರಡು ಲಕ್ಷ ಮತಗಳ ಅಂತರದಿಂದ ಗೋವಿಂದ ಕಾರಜೋಳರವರು ಗೆಲ್ಲುತ್ತಾರೆಂದು ಹೇಳಿದ್ದೆ. ಚುನಾವಣೆ ಸಮೀಸುತ್ತಿದ್ದಂತೆ ಅಸಲಿ ಸತ್ಯ ಏನೆಂಬುದು ನಮಗೆ ಗೊತ್ತಾಯಿತು. ಅಭ್ಯರ್ಥಿ ಗೋವಿಂದ ಕಾರಜೋಳರವರು ಗೆದ್ದರೆ ಎಲ್ಲಿ ನಮ್ಮ ಮೌಲ್ಯ ಕಡಿಮೆಯಾಗುತ್ತದೇನೋ ಎಂದು ಬಿಜೆಪಿ. ಮುಖಂಡರು ಅಂದುಕೊಂಡಿದ್ದರು. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಬಿಜೆಪಿ ಇಲ್ಲಿ ಗೆಲ್ಲುತ್ತಿರಲಿಲ್ಲ. ಹಾಗಾಗಿ ಕಡಿಮೆ ಅಂತರದಲ್ಲಿ ಗೆದ್ದಿರುವ ಗೋವಿಂದ ಕಾರಜೋಳರವರು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕುತಂತ್ರಿಗಳನ್ನು ಪಕ್ಷದಿಂದ ಹೊರ ಹಾಕುವಂತೆ ಮನವಿ ಮಾಡಿದರು.
ಚುನಾವಣೆಯಲ್ಲಿ ನಮಗೆ ವಹಿಸಿದ್ದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದರಿಂದ ಗೋವಿಂದ ಕಾರಜೋಳ ಗೆದ್ದಿದ್ದಾರೆ. ಬಿಜೆಪಿ ಮುಖಂಡರು ಯಾರು ನಮ್ಮನ್ನು ಕರೆಯಲಿಲ್ಲ. ಅಭ್ಯರ್ಥಿಯೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಮಾತನಾಡಿದ್ದರಿಂದ ಚುನಾವಣೆಯಲ್ಲಿ ಎಲ್ಲಾ ಕಡೆ ಮತ ಯಾಚಿಸಿದೆವು. ಜಿಲ್ಲೆಯಾದ್ಯಂತ ಒಗ್ಗಟ್ಟಾಗಿ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಶ್ರಮಿಸಿದ್ದರಿಂದ ಬಿಜೆಪಿಗೆ ಗೆಲುವು ಸಿಕ್ಕಿದೆ. ಭದ್ರಾ ಮೇಲ್ದಂಡೆ, ಮದಕರಿನಾಯಕ ಥೀಂ ಪಾರ್ಕ್‍ಗೆ ಒತ್ತು ಕೊಡಬೇಕೆಂದು ಒತ್ತಾಯಿಸಿದ ಬಿ.ಕಾಂತರಾಜ್ ಚುನಾವಣೆಯಲ್ಲಿ ದುಡಿದವರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡರೆ ಸಾಕು ಎಂದು ಮನವಿ ಮಾಡಿದರು.
ಚುನಾವಣೆಯಲ್ಲಿ ಮತದಾರರು ಪಕ್ಷದ ಜೊತೆ ಅಭ್ಯರ್ಥಿಯ ನಡೆತೆಯನ್ನು ನೋಡಿ ಮತ ಹಾಕುತ್ತಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ನಮ್ಮನ್ನು ಯಾರು ಕರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮುಖಂಡ ಮಠದಟ್ಟಿ ವೀರಣ್ಣ, ತಾಲ್ಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.