ದಾವಣಗೆರೆ,(ಜ.07) : ಕೃಷಿ ಇಲಾಖೆ ವತಿಯಿಂದ ಶುಕ್ರವಾರದಂದು ಆನಗೋಡು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಸಕ ಪ್ರೊ. ಲಿಂಗಣ್ಣ ನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ರೈತರೆ ದೇಶದ ಬೆನ್ನೆಲುಬು ರೈತರು ಬೆಳೆ ಬೆಳೆಯದೇ ಇದ್ದರೆ ಆಹಾರದ ಕೊರತೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಕೃಷಿ ಮಾಡಲು ಮುಖ್ಯವಾಗಿ ಬೇಕಾಗಿರುವುದು ನೀರು. ಮಳೆ ಚೆನ್ನಾಗಿ ಬಂದಾಗ ಮಳೆನೀರು ಕೊಯ್ಲು ಮಾಡಿ ಸಂರಕ್ಷಿಸಿಟ್ಟುಕೊಳ್ಳುವಂತಹ ಘಟಕಗಳನ್ನು ಪ್ರತಿಯೊಬ್ಬ ರೈತರು ತಮ್ಮ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡರೆ ಅಂತರ್ಜಲ ಹೆಚ್ಚುವುದಲ್ಲದೆ, ಮಳೆ ಕೈ ಕೊಟ್ಟಾಗ ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ನೀರುಣಿಸಿದರೆ ಬೆಳೆ ಬದುಕುವುದರ ಜೊತೆಗೆ ರೈತರು ಬದುಕುತ್ತಾರೆ.
ಹೀಗಾಗಿ ಶೇಖರಿಸಿದ ನೀರನ್ನು ಪೋಲು ಮಾಡದೆ ತಮ್ಮ ತಮ್ಮ ಹೋಲಗಳಲ್ಲಿ ತುಂತುರು ನೀರಾವರಿ ಘಟಕಗಳನ್ನು ಅಳವಡಿಸಿಕೊಂಡು ಬೆಳೆಗಳಿಗೆ ಅವಶ್ಯಕ ಹಂತಗಳಲ್ಲಿ ನೀರು ನೀಡಬಹುದು.
ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಸಾಮಾನ್ಯ ವರ್ಗದವರಿಗೆ, ಸಣ್ಣ ರೈತರಿಗೆ, ದೊಡ್ಡ ರೈತರೆಲ್ಲರಿಗೂ ಶೇಕಡಾ 90 ರ ರಿಯಾಯಿತಿ ದರದಲ್ಲಿ ಕೇವಲ ಎರಡು ಸಾವಿರ ರೂ. ಗಳಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಿಸುತ್ತಿದೆ.
ಅನ್ನ ನೀಡುವ ಅನ್ನದಾತನ ಅಭಿವೃದ್ಧಿಗಾಗಿ ಸರ್ಕಾರ ಈ ರೀತಿಯ ಅನೇಕ ಕಾರ್ಯಕ್ರಮಗಳನ್ನು ರೈತ ಸಮುದಾಯಕ್ಕೆ ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಮಾತನಾಡಿ, ರೈತರು ತುಂತುರು ನೀರಾವರಿ ಘಟಕಗಳನ್ನು ತೆಗೆದುಕೊಳ್ಳಲು ಪಹಣಿ, ಆಧಾರ್ ಪ್ರತಿ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, 2 ಭಾವಚಿತ್ರ, ರೂ. 20/ರ ಛಾಪಾ ಕಾಗದದಲ್ಲಿ ಅಫಿಡವಿಟ್, ಬೆಳೆ ದೃಢೀಕರಣ, ಕೊಳವೆ ಬಾವಿ ದೃಢೀಕರಣ, ಚೆಕ್ ಬಂಧಿ, ಪ.ಜಾತಿ, ಪ.ಪಂಗಡ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ. ದಾಖಲಾತಿಗಳನ್ನು ಹತ್ತಿರದ ರೈತಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ನೇಗಿಲಸಿರಿ ರೈತ ಉತ್ಪಾದಕರ ಘಟಕದ ಅಧ್ಯಕ್ಷ ಟಿ.ಎಂ. ಸಿದ್ದು, ನಿರ್ದೇಶಕರಾದ ಅನ್ನಪೂರ್ಣಮ್ಮ, ಪ್ರಗತಿಪರ ರೈತರಾದ ಹೊರಟ್ಟಿ ಬಸವರಾಜಪ್ಪ, ನಟರಾಜ್, ಅಜ್ಜಯ್ಯ, ಕೃಷಿ ಅಧಿಕಾರಿ ಶ್ರೀನಿವಾಸ್, ಆತ್ಮ ಸಿಬ್ಬಂದಿಗಳಾದ ವೆಂಕಟೇಶ್, ರೇಷ್ಮ ಹಾಗೂ ರೈತರು ಭಾಗವಹಿಸಿದ್ದರು.