ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಎರಡು ಲಕ್ಷ ರೂ.ವಿತರಣೆ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.11): ಸಜ್ಜನಕೆರೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಎರಡು ಲಕ್ಷ ರೂ.ಗಳ ಡಿ.ಡಿ.ಯನ್ನು ಬುಧವಾರ ವಿತರಿಸಲಾಯಿತು.

ಆಂಜನೇಯಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೀರೇಶ್‍ಗೆ ಎರಡು ಲಕ್ಷ ರೂ.ಗಳ ಡಿ.ಡಿ. ವಿತರಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಅಶೋಕ್ ಬಿ. ತಾಲ್ಲೂಕಿನಲ್ಲಿ 3150 ಪ್ರಗತಿಬಂಧು ಸ್ವಸಹಾಯ ಸಂಘಗಳಿದ್ದು, 35610 ಸದಸ್ಯರುಗಳಿದ್ದಾರೆ. ಒಬ್ಬೊಬ್ಬರು ಹತ್ತು ರೂ.ನಂತೆ ಉಳಿತಾಯ ಮಾಡಿದ್ದು, 69 ಕೋಟಿ ರೂ.ಗಳಿದೆ ಎಂದು ಹೇಳಿದರು.

ಕೃಷಿ, ಹೈನುಗಾರಿಕೆ, ಶಿಕ್ಷಣ ಹೀಗೆ ಬೇರೆ ಬೇರೆ ಉದ್ದೇಶಗಳಿಗಾಗಿ 147 ಕೋಟಿ ರೂ.ಗಳ ಸಾಲ ನೀಡಲಾಗಿದೆ. ಶಾಲೆಗಳಿಗೆ ಬೆಂಚ್, ಡೆಸ್ಕ್ ಹಾಗೂ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಗುತ್ತಿದೆ. ಶಿಕ್ಷಕರುಗಳ ಕೊರತೆಯಿರುವ ಶಾಲೆಗಳಿಗೆ ಗೌರವಧನದ ಮೂಲಕ ಶಿಕ್ಷಕರುಗಳನ್ನು ನೇಮಕ ಮಾಡಲಾಗುವುದು ಎಂದು ಯೋಜನೆ ಮಹತ್ವವನ್ನು ವಿವರಿಸಿದರು.

ಯೋಜನೆ ಆರಂಭಗೊಂಡು 42 ವರ್ಷಗಳಾಗಿದ್ದು, ಕಳೆದ ಹನ್ನೊಂದು ವರ್ಷಗಳಿಂದ ತಾಲ್ಲೂಕಿನಲ್ಲಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ದೇವಸ್ಥಾನ, ಮಠ, ಮಂದಿರಗಳ ಸುತ್ತಮುತ್ತ ವಾತಾವರಣ ಸ್ವಚ್ಚವಾಗಿರಬೇಕೆಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗಡೆರವರ ಕನಸು.

ಅದರಂತೆ ಅನೇಕ ದೇವಾಲಯಗಳ ಜೀರ್ಣೋದ್ದಾರಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ದಿಗೆ ನೀಡಿರುವ ಎರಡು ಲಕ್ಷ ರೂ.ಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಮಿತಿಯವರಲ್ಲಿ ಅಶೋಕ್ ಬಿ.ವಿನಂತಿಸಿದರು.

ಒಕ್ಕೂಟದ ಮೇಲ್ವಿಚಾರಕಿ ಶೋಭ, ವೆಂಕಟೇಶ್, ರಮೇಶ್, ಸಿದ್ದೇಶ್, ಹನುಮಂತಪ್ಪ, ಗೋವಿಂದಪ್ಪ ಹಾಗೂ ಸಜ್ಜನಕೆರೆ ಗ್ರಾಮದ ಮುಖಂಡರು ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸದಸ್ಯರುಗಳು ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *